ಬೆಂಗಳೂರು: ಆನ್ಲೈನ್ ಗೇಮ್ ಸೇರಿದಂತೆ ಅಂತಾರಾಷ್ಟ್ರೀಯ ಜಾಲತಾಣಗಳನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂ. ಸಂಪಾದನೆ ಮಾಡುತ್ತಿದ್ದ ಆರೋಪದಡಿ ಶ್ರೀಕೃಷ್ಣ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ 9 ಕೋಟಿ ರೂ. ಮೌಲ್ಯದ 31 ಬಿಟ್ ಕಾಯಿನ್ ವಶಕ್ಕೆ ಪಡೆದುಕೊಂಡಿದ್ದಾರೆ.
ಡ್ರಗ್ಸ್ ಪ್ರಕರಣದಡಿ ಬಂಧನಕ್ಕೆ ಒಳಗಾಗಿದ್ದ ಜಯನಗರದ ನಿವಾಸಿ ಹ್ಯಾಕರ್ ಶ್ರೀಕೃಷ್ಣ ವಿಚಾರಣೆ ವೇಳೆ ಅಂತಾರಾಷ್ಟ್ರೀಯ ಮಟ್ಟದ ವೆಬ್‌ಸೈಟ್‌ಗಳು ಮತ್ತು ಬೇರೆ ಬೇರೆ ದೇಶದ ವಿವಿಧ ಗೇಮ್ ವೆಬ್ಸೈಟ್ ಮತ್ತು ಕ್ರಿಪ್ಟೋ ಕರೆನ್ಸಿಯಾದ ಬಿಟ್ ಕಾಯಿನ್, ವೈಎಫ್‌ಐ, ಇಥೇರಿಯಂ ಖಾತೆಗಳನ್ನು ಹ್ಯಾಕ್ ಮಾಡಿರುವುದನ್ನು ಬೆಳಕಿಗೆ ಬಂದಿದೆ.
ತನ್ನ ಸಹಚರರಾದ ಸುನೀಷ್ ಹೆಗ್ಡೆ, ಪ್ರಸಿದ್ ಶೆಟ್ಟಿ, ಸುಜಯ್, ಹೇಮಂತ್ ಮುದ್ದಪ್ಪ, ರಾಬಿನ್ ಖಂಡೇಲ್‌ವಾಲ್ ಹಾಗೂ ಇತರರೊಂದಿಗೆ ಸೇರಿಕೊಂಡು ಲಾಭ ಪಡೆಯುವ ಉದ್ದೇಶದಿಂದ ದೇಶದ ಹಾಗೂ ಬೇರೆ ದೇಶಗಳ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ, ಡೇಟಾವನ್ನು ಕಳವು ಮಾಡುತ್ತಿದ್ದರು. 3 ಬಿಟ್ ಕಾಯಿನ್ ಎಕ್ಸ್ ಚೇಂಜ್, 10 ಪೋಕರ್ ವೆಬ್ ಸೈಟ್ ಹಾಗೂ 4 ವೆಬ್ಸೈಟ್ ಗಳನ್ನು ಹ್ಯಾಕ್ ಮಾಡಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.
ಆರೋಪಿಗಳು ಪ್ರತಿಷ್ಠಿತ ಹೋಟೆಲ್, ರೆಸಾರ್ಟ್‌ಗಳಲ್ಲಿ ವಾಸ್ತವ್ಯ ಮಾಡುತ್ತಿದ್ದು, ಐಷಾರಾಮಿ ಜೀವನಕ್ಕಾಗಿ ಬಿಟ್ ಕಾಯಿನ್ ಖಾತೆಗಳನ್ನು ಹ್ಯಾಕ್ ಮಾಡಿ, ಬಿಟ್ ಕಾಯಿನ್‌ಗಳನ್ನು ಕಳವು ಮಾಡಿ, ಅದನ್ನು ಬಿಟ್ ಕಾಯಿನ್ ಟ್ರೇಡರ್ ರಾಬಿನ್ ಖಂಡೇಲ್ ವಾಲ್ ಸೇರಿದಂತೆ ಇತರ ಟ್ರೇಡರ್‌ಗಳಿಗೆ ನೀಡಿ, ಅವರಿಂದ ತನ್ನ ಸಹಚರರ ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು 2019ನೇ ಸಾಲಿನಲ್ಲಿ ಆರೋಪಿ ಶ್ರೀಕೃಷ್ಣ ಅಕ್ರಮವಾಗಿ ಹಣ ಸಂಪಾದನೆ ಮಾಡುವ ದುರುದ್ದೇಶದಿಂದ ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್ಮೆಂಟ್ ಜಾಲತಾಣ ಹ್ಯಾಕ್ ಮಾಡಿ ಕೋಟ್ಯಂತರ ರೂ. ಹಣವನ್ನು ತನ್ನ ಸಹಚರರ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿದ್ದ. ಇದುವರೆಗೆ ಈತನಿಂದ 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್‌ಗಳನ್ನು ವಶಪಡಿಸಿಕೊಂಡು ಅವುಗಳನ್ನು ಅಮಾನತು ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಶ್ರೀಕೃಷ್ಣನ ಲೀಲೆ ಕೆದಕಲು ಮುಂದಾದ ಸಿಸಿಬಿ.. ಅಧಿಕಾರಿಗಳಿಗೇ ಕಿರಿಕಿರಿ ಮಾಡಿದ ಹ್ಯಾ'ಕಿಂಗ್'!!