ಬೆಂಗಳೂರು: ನಟ ದರ್ಶನ್, ಸಚಿವ ಸುಧಾಕರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಕೋವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘಿಸಿಲ್ಲ ಎಂದು ಸರ್ಕಾರ ಹೈಕೋರ್ಟ್ಗೆ ಲಿಖಿತ ವರದಿ ಸಲ್ಲಿಸಿದೆ.
ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪೂರಕವಾಗಿ ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರು ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವ ಕುರಿತು ವಕೀಲೆ ಗೀತಾ ಮಿಶ್ರಾ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ, ಈ ಕುರಿತು ತನಿಖೆ ನಡೆಸಿ ಕೈಗೊಂಡ ಕ್ರಮಗಳ ಕುರಿತು ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿತ್ತು. ಮಂಗಳವಾರ ನಡೆದ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು ಲಿಖಿತ ಹೇಳಿಕೆ ಸಲ್ಲಿಸಿದ್ದು, ನಟ ದರ್ಶನ್, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಗಣ್ಯರು ಯಾರೂ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಸರ್ಕಾರ ತಿಳಿಸಿದೆ.
ಲಿಖಿತ ವರದಿಯಲ್ಲಿ ಏನಿದೆ..?
ಮೈಸೂರಿನ ಚಾಮುಂಡಿ ದೇವಸ್ಥಾನಕ್ಕೆ ಚಿತ್ರನಟ ದರ್ಶನ್ ಭೇಟಿ ನೀಡಿ ಮಾರ್ಗಸೂಚಿ ಉಲ್ಲಂಘಿಸಿದ್ದ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಸರ್ಕಾರ, ಘಟನೆ ಸಂಬಂಧ ಮೈಸೂರು ಉಪವಿಭಾಗಾಧಿಕಾರಿ ತನಿಖೆ ನಡೆಸಿದ್ದಾರೆ. ನಟ ದರ್ಶನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ಮೈಸೂರಿನಲ್ಲಿ ಲಾಕ್ ಡೌನ್ ಇರಲಿಲ್ಲ, ದೇವಸ್ಥಾನ ಭೇಟಿಗೆ ಸಂಪೂರ್ಣ ನಿಷೇಧವೂ ಇರಲಿಲ್ಲ.
ಪ್ರತಿ ವರ್ಷದಂತೆ ಆಷಾಢ ಮಾಸದಲ್ಲಿ ನಡೆಯುವ ವಿಶೇಷ ಪೂಜೆಗೆ ಲಕ್ಷಾಂತರ ಜನ ಬರುವುದರಿಂದ ಜಿಲ್ಲಾಡಳಿತ ಗಣ್ಯ ವ್ಯಕ್ತಿಗಳಿಗೆ ಹಾಗೂ ಕೆಲ ಸ್ಥಳೀಯರಿಗೆ ಅವಕಾಶ ನೀಡಿತ್ತು. ಮುಜರಾಯಿ ಇಲಾಖೆ ಭಕ್ತರಿಗೆ ಅಥವಾ ಗಣ್ಯರಿಗೆ ಎಂದು ಪ್ರತ್ಯೇಕವಾಗಿ ಅನುಮತಿಯನ್ನೇನೂ ಕೊಟ್ಟಿರಲಿಲ್ಲ. ಕಳೆದ ವಿಚಾರಣೆ ವೇಳೆ ಈ ಕುರಿತು ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಕ್ಷಮೆ ಕೋರುತ್ತೇವೆ ಎಂದು ಸರ್ಕಾರ ತಿಳಿಸಿದೆ.
ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಕೂಡ ಮಾರ್ಗಸೂಚಿ ಉಲ್ಲಂಘಿಸಿಲ್ಲ. ಸದಾಶಿವನಗರ ಠಾಣೆ ಪೊಲೀಸರು ತನಿಖೆ ನಡೆಸಿದಾಗ ಸಚಿವರು ಹಾಗು ಅವರ ಕುಟುಂಬ ಸದಸ್ಯರು ಖಾಸಗಿ ಸ್ವಿಮ್ಮಿಂಗ್ ಫೂಲ್ ಬಳಸುತ್ತಿರುವುದಾಗಿ ತಿಳಿದು ಬಂದಿದೆ. ದೂರುದಾರರು ಹೇಳಿರುವಂತೆ ಸಚಿವರು ಸಾರ್ವಜನಿಕ ಈಜುಕೊಳ ಬಳಸಿದರಷ್ಟೇ ಮಾರ್ಗಸೂಚಿ ಉಲ್ಲಂಘನೆಯಾಗಬಹುದಿತ್ತು. ಆದರೆ, ಸಚಿವರು ಖಾಸಗಿ ಈಜುಕೊಳ ಬಳಸಿರುವುದು ಉಲ್ಲಂಘನೆಯಲ್ಲ ಎಂದಿದೆ.
ಡಿ.ಕೆ. ಶಿವಕುಮಾರ್ ಪುತ್ರಿ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ 20 ರಿಂದ 25 ಸಂಬಂಧಿಕರಷ್ಟೇ ಭಾಗವಹಿಸಿದ್ದರು. ಈ ಕುರಿತು ಗುಪ್ತಚರ ಇಲಾಖೆ ಮತ್ತು ಸ್ಥಳೀಯ ಪೊಲೀಸರು ನಡೆಸಿದ ತನಿಖೆಯಲ್ಲಿ ಸ್ಪಷ್ಟವಾಗಿದೆ. ಹಾಗೆಯೇ, ನಾಡಪ್ರಭು ಕೆಂಪೇಗೌಡ ಪುತ್ಥಳಿ ನಿರ್ಮಾಣದ ಅಡಿಗಲ್ಲು ಕಾರ್ಯಕ್ರಮದಲ್ಲಿ ಎಲ್ಲಿಯೂ ಮಾರ್ಗಸೂಚಿಗಳು ಉಲ್ಲಂಘನೆಯಾಗಿಲ್ಲ.
ಈ ಕುರಿತು ಸ್ಥಳೀಯ ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ ಎಂದು ವರದಿ ನೀಡಿರುವ ಸರ್ಕಾರ ಉಳಿದಂತೆ ಎಲ್ಲೆಲ್ಲಿ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಲಾಗಿದೆಯೋ ಅಲ್ಲೆಲ್ಲಾ ಕಾನೂನು ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೈಕೋರ್ಟ್ ಗೆ ಮಾಹಿತಿ ನೀಡಿದೆ.