ಬೆಂಗಳೂರು : ಸಿನಿಮೀಯ ರೀತಿ ಕಾರು ಬಾಡಿಗೆಗೆ ಪಡೆದು ವಂಚನೆ ಮಾಡಿದ್ದ ಗ್ಯಾಂಗ್‌ನ ಸದಸ್ಯರಿಗೆ ಬಲೆ ಹಾಕುವಲ್ಲಿ ಯಲಹಂಕ ನ್ಯೂಟೌನ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಖಲೀಲ್ ಉಲ್ಲಾ ಹಾಗೂ ಅಕ್ಷಯ್ ಎಂಬಿಬ್ಬರು ಬಂಧಿತ ಆರೋಪಿಗಳು. ಆರೋಪಿಗಳು ಸಿನಿಮೀಯ ರೀತಿ ಕಾರು ಎಗರಿಸುತ್ತಿದ್ದರು. ಮೊದಲು ಕಾರು ಮಾಲೀಕರ ಪರಿಚಯ ಮಾಡಿಕೊಂಡು ನಯವಾಗಿ ಮಾತಾಡಿ ನಂತರ ಪರಿಚಯಸ್ಥರಿಗೆ ಕಾರು ಬಾಡಿಗೆ ಬೇಕು ಹೆಚ್ಚು ಹಣ ನೀಡ್ತಾರೆ ಎಂದು ಪುಂಗಿಬಿಡ್ತಿದ್ರು. ಇವರ ಮಾತನ್ನ ನಂಬಿ ಕೆಲ ದಾಖಲೆಗಳನ್ನು ಪಡೆದು ಮಾಲೀಕರು ಕಾರು ಬಾಡಿಗೆಗೆ ನೀಡುತಿದ್ದರು.
ಈ ವೇಳೆ ಮಾಲೀಕರನ್ನ ನಂಬಿಸಲು ತಿಂಗಳಿಗೆ ಇಂತಿಷ್ಟು ಹಣ ಎಂದು ಕೊಡುತ್ತಿದ್ದರು. ಎರಡು ತಿಂಗಳ ಕಾಲ ಹಲವು ಬಾರಿ ಕಾರು ಪಡೆದು ಸರಿಯಾಗಿ ಹಣ ನೀಡಿ ಮಾಲೀಕನಿಗೆ ಹತ್ತಿರವಾಗುತ್ತಿದ್ದರು. ಬಳಿಕ ಯಾವುದೇ ದಾಖಲೆ ನೀಡದೆ ಕಾರು ಬಾಡಿಗೆಗೆ ಪಡೆದು, ಮಾಲೀಕರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದರು. ಕದ್ದ ಕಾರನ್ನು ಬೇರೊಬ್ಬರಿಗೆ ಲಕ್ಷ ಲಕ್ಷಕ್ಕೆ ಮಾರಾಟ ಮಾಡ್ತಿದ್ದರು.
ಕಾರು ಕಳೆದುಕೊಂಡ ವಿಜಯ್ ಗೌಡ ಎಂಬುವರು ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಿದ್ದರು. ಪ್ರಕರಣ ಬೆನ್ನತ್ತಿದ ಪೊಲೀಸರು ಖಲೀಲ್ ವುಲ್ಲಾ ಮತ್ತು ಅಕ್ಷಯ್ನನ್ನಬಂಧಿಸಿದ್ದಾರೆ. ಪ್ರಮುಖ ಆರೋಪಿ ನಿರಂಜನ್ಗಾಗಿ ಶೋಧ ಮುಂದುವರೆಸಿದ್ದಾರೆ. 10 ಕಾರುಗಳನ್ನು ಇದೇ ಮಾದರಿ ಕದ್ದು ವಂಚಿಸಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. 8 ವಿವಿಧ ಮಾದರಿಯ ಕಾರುಗಳನ್ನ ವಶಕ್ಕೆ ಪಡೆಯಲಾಗಿದೆ.