ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಮಹೀಂದ್ರಾ ಜೈಲೊ ಕಾರು ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ದೇವನಹಳ್ಳಿ ತಾಲೂಕಿನ ಹಂದ್ರಹಳ್ಳಿ ಗ್ರಾಮದ ಬಳಿ ಸಂಭವಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ನಕ್ಕಲಪಲ್ಲಿ ಗ್ರಾಮದವರಾದ ಮಲ್ಲಿಕಾರ್ಜುನರೆಡ್ಡಿ (26), ನಾಗರಾಜ (25), ಅಶೋಕ ರೆಡ್ಡಿ (24) ಸುಂದರ್ ಮೃತರು. ಆವಲಹಳ್ಳಿಯಿಂದ ಕಾರಿನಲ್ಲಿ ಒಂಭತ್ತು ಜನರು ನಂದಿಬೆಟ್ಟಕ್ಕೆ ತೆರಳುತ್ತಿದ್ದರು. ಬೆಳಗ್ಗೆ ಹಂದರಳ್ಳಿ ಬಳಿ ವೇಗವಾಗಿ ವಾಹನ ಚಾಲನೆ ಮಾಡಿಕೊಂಡು ಬಂದಿದ್ದಾರೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.
ಮೃತ ದೇಹಗಳನ್ನು ಆಕಾಶ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನುಳಿದ ಐವರಾದ ಗಿರೀಶ್ (23), ರಮೇಶ್ (26), ಮಂಜುನಾಥ್ (26), ಅಶೋಕ್ ಎನ್ ವಿ (26) ಗಂಭೀರ ಗಾಯಗಳಾಗಿದ್ದು, ಹೊಸಕೋಟೆ ಮತ್ತು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಚನ್ನರಾಯಪಟ್ಟಣ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.