ಬೆಂಗಳೂರು: ಮಹಾರಾಷ್ಟ್ರ ಹಾಗೂ ಹರಿಯಾಣ ಫಲಿತಾಂಶ ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಿದೆ. ಮತದಾರರನ್ನು ಯಾವಾಗಲೂ ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂಬುದು ಈ ಫಲಿತಾಂಶದಿಂದ ಸಾಬೀತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳು ಪ್ರಚಾರ ಮಾಡಲು ಸಾಧ್ಯವಾಗದಂತಹ, ನಾಯಕರು ಮಾತನಾಡಲು ಭಯಬೀಳುವಂತ ಸ್ಥಿತಿ ಮಹಾರಾಷ್ಟ್ರ, ಹರಿಯಾಣ ರಾಜ್ಯಗಳಲ್ಲಿ ನಿರ್ಮಾಣ ಆಗಿತ್ತು. ಆದರೂ ಜನರು ಪ್ರತಿಪಕ್ಷಗಳಿಗೆ ಮನ್ನಣೆ ನೀಡಿದ್ದಾರೆ. ಬಿಜೆಪಿ ಮಹಾರಾಷ್ಟ್ರದಲ್ಲಿ ಕಳೆದ ಬಾರಿಗಿಂತ ಕಡಿಮೆ ಸ್ಥಾನ ಗೆದ್ದಿದೆ. ಮತದಾರರನ್ನು ದಿಕ್ಕು ತಪ್ಪಿಸಲು ಸಾಧ್ಯವಿಲ್ಲ ಎಂಬುದು ಇದರಿಂದ ಸಾಬೀತಾಗಿದೆ ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ ಬರ, ನೆರೆ ಇತ್ತು. ಇಂತಹ ವಾಸ್ತವ ಸಮಸ್ಯೆಗಳ ಬಗ್ಗೆ ಗಮನಹರಿಸದೆ ಕೇವಲ 370 ವಿಧಿ ಕುರಿತು ಪ್ರಧಾನಿ ಪ್ರಚಾರ ನಡೆಸಿದರು. ಮಹಾರಾಷ್ಟ್ರ ಹಾಗೂ ಹರಿಯಾಣ ಚುನಾವಣಾ ಫಲಿತಾಂಶ ಕುರಿತು ಮತಗಟ್ಟೆ ಸಮೀಕ್ಷೆಗಳೆಲ್ಲಾ ಸುಳ್ಳಾಗಿವೆ. ಎರಡು ರಾಜ್ಯದಲ್ಲಿ ಗೆಲ್ಲಬೇಕೆಂಬ ಛಲದಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಹೇಗೆ ಚುನಾವಣೆ ನಡೆಸಿದ್ದಾರೆ ಗೊತ್ತಿದೆ. ಆಪರೇಷನ್ ಕಮಲ ಮಾಡಿದ್ದಾರೆ. ಹೆದರಿಸಿ ಇತರೆ ಪಕ್ಷದ ಮುಖಂಡರನ್ನು ಸೆಳೆದಿದ್ದಾರೆ. ಅದಕ್ಕೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ತಿರುಗೇಟು ನೀಡಿದರು. ಈ ಎರಡೂ ರಾಜ್ಯಗಳ ಚುನಾವಣಾ ಫಲಿತಾಂಶ ರಾಜ್ಯದ ಉಪ ಚುನಾವಣೆಯ ಮೇಲೆ ಪರಿಣಾಮ ಬೀರಬಹುದು ಎಂದರು.
ಕೇಂದ್ರದಿಂದ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ನಡೆದಿದೆ. ಸ್ವತಂತ್ರ ಸಂಸ್ಥೆಗಳು ಮುಕ್ತವಾಗಿ ಕೆಲಸ ಮಾಡದ ಅಘೋಷಿತ ತುರ್ತು ಇದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ವಿಪಕ್ಷಗಳೇ ಇರಬಾರದೆಂಬ ಬಿಜೆಪಿಯ ತೀರ್ಮಾನ ಅಷ್ಟು ಸುಲಭವಲ್ಲ ಎಂಬ ಸಂದೇಶವನ್ನು ಮತದಾರ ನೀಡಿದ್ದಾನೆ. ಇದನ್ನು ಬಿಜೆಪಿ ಮುಖಂಡರು ಅರಿತುಕೊಳ್ಳಬೇಕು ಎಂದು ಹೇಳಿದರು.