ಬೆಂಗಳೂರು: ಕ್ಯಾನ್ಸರ್.. ಈ ಪದವನ್ನು ಕೇಳಿದರೆ ಸಾಕು. ಜನರು ಭಯಭೀತರಾಗುತ್ತಾರೆ. ಕ್ಯಾನ್ಸರ್ ಶ್ರೀಮಂತರ ಕಾಯಿಲೆ ಎಂಬ ಮಾತಿತ್ತು. ಆದ್ರೀಗ ಸಾಮಾನ್ಯರನ್ನೂ ಈ ಮಾರಕ ರೋಗ ಬಾಧಿಸುತ್ತಿದೆ. ಭಾರತದಲ್ಲಿ ಶೇಕಡ 7ರಷ್ಟು ಸಾವುಗಳು ಈ ಮಹಾಮಾರಿಯಿಂದ್ಲೇ ಸಂಭವಿಸುತ್ತಿವೆ ಎಂದು ವರದಿ ಆಗಿದೆ.
ಇತ್ತ ಕ್ಯಾನ್ಸರ್ ಸಂಬಂಧ ಸಾಕಷ್ಟು ಸಂಶೋಧನೆಗಳು ನಡೆಯುತ್ತಿದ್ದರೂ, ವ್ಯಕ್ತಿಯನ್ನು ಕ್ಯಾನ್ಸರ್ನಿಂದ ಪೂರ್ಣ ಗುಣಮುಕ್ತಗೊಳಿಸಲು ಸಾಧ್ಯವಾಗಿಲ್ಲ. ಯಾಕೆಂದರೆ ಕ್ಯಾನ್ಸರ್ ರೋಗ ಹೀಗೆಯೇ ಬರುತ್ತದೆ ಎಂದು ಹೇಳುವುದಾಗಲಿ, ಸ್ಪಷ್ಟ ಕಾರಣ ಹುಡುವುದಾಗಲಿ ಇದುವರೆಗೂ ಸಾಧ್ಯವಾಗಿಲ್ಲ. ಕ್ಯಾನ್ಸರ್ ರೋಗ ನಾನಾ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದಕ್ಕೆ ಮುಕ್ತಿ ಹಾಡಲು ಸಂಶೋಧನೆಗಳು ನಡೆಯುತ್ತಲೇ ಇವೆ.
ಮೊನ್ನೆಯಷ್ಟೇ ವೈದ್ಯಕೀಯ ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಬಂದಿದ್ದು, ಅದರಲ್ಲಿ ಆಕ್ಸಿಜನ್ ಮತ್ತು ಕ್ಯಾನ್ಸರ್ಗೆ ಸಂಬಂಧಪಟ್ಟ ಸಂಶೋಧನೆ ಕುರಿತಂತೆ ಮೂವರು ವಿಜ್ಞಾನಿಗಳಿಗೆ ಪ್ರಶಸ್ತಿ ಲಭಿಸಿದೆ. ಈ ಸಂಶೋಧನೆಯಿಂದ ಮುಖ್ಯವಾಗಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಯಾವ ರೀತಿ ತಡೆಗಟ್ಟಬಹುದು, ಆಮ್ಲಜನಕದ ಅವಶ್ಯಕತೆಗೆ ತಕ್ಕಂತೆ ಜೀವಕೋಶಗಳು ಹೇಗೆ ಹೊಂದಿಕೊಳ್ಳುತ್ತವೆ ಹಾಗೂ ಹೇಗೆ ಸ್ಪಂದಿಸುತ್ತವೆ ಎಂಬುದನ್ನು ಪತ್ತೆ ಹಚ್ಚಬಹುದು ಎಂಬ ಬಗ್ಗೆ ಅಧ್ಯಯನ ನಡೆದಿದೆ. ಈ ಪರಿಕಲ್ಪನೆ ಬಳಸಿಕೊಂಡು ಯಾವ ರೀತಿಯಲ್ಲಿ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ಎಂಬುದನ್ನ ತಿಳಿಯಬಹುದಾಗಿದೆ.
ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಈ ಸಂಶೋಧನೆಗಳು ಸಹಾಯವಾಗಲಿದೆ. ಅದರಲ್ಲೂ ಈ ಸಂಶೋಧನೆಗಳು ಡ್ರಗ್ಸ್ ರೂಪದಲ್ಲಿ ಬಂದಾಗಷ್ಟೇ, ಕ್ಯಾನ್ಸರ್ ಗುಣಮುಖ ಮಾಡಲು ಸಾಧ್ಯವಿದೆ ಎನ್ನುತ್ತಾರೆ ತಜ್ಞರು.