ಬೆಂಗಳೂರು: ಸಂಜೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ ನಡೆಯುತ್ತಿದ್ದು ರಾಜ್ಯದ ಮೂವರು ಸಂಸದರಿಗೆ ಹೈಕಮಾಂಡ್ ಬುಲಾವ್ ನೀಡಿದ್ದು, ಮೂವರೂ ನವದೆಹಲಿಗೆ ತೆರಳಿದ್ದಾರೆ. ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದರೂ ಸಸ್ಪೆನ್ಸ್ ಮಾತ್ರ ಮುಂದುವರೆದಿದೆ.
ಚಿತ್ರದುರ್ಗ ಸಂಸದ ಆನೇಕಲ್ ನಾರಾಯಣಸ್ವಾಮಿ,ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಮತ್ತು ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಗೆ ದೆಹಲಿಯಿಂದ ದೂರವಾಣಿ ಕರೆ ಬಂದಿದ್ದು, ವರಿಷ್ಠರ ಬುಲಾವ್ ಹಿನ್ನಲೆ ಮೂವರೂ ಸಂಸದರು ನವದೆಹಲಿಗೆ ತೆರಳಿದ್ದಾರೆ.
ಸಧ್ಯ ರಾಜ್ಯಕ್ಕೆ ಎರಡು ಸಚಿವ ಸ್ಥಾನ ಲಭ್ಯವಾಗಲಿದೆ ಎನ್ನುವ ಮಾಹಿತಿ ಇದ್ದರೂ ಮೂವರಿಗೆ ಕರೆ ಬಂದಿದೆ, ಕೊನೆ ಕ್ಷಣದಲ್ಲಿ ಯಾವ ಬದಲಾವಣೆ ಬೇಕಾದರೂ ಆಗಬಹುದು. ಸಧ್ಯ ದೂರವಾಣಿ ಕರೆ ಬಂದಿರುವ ಮೂವರೂ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಆದರೆ ಸುರೇಶ್ ಅಂಗಡಿ ನಿಧನದಿಂದ ತೆರವಾದ ಸ್ಥಾನವನ್ನು ಲಿಂಗಾಯತ ಸಮುದಾಯಕ್ಕೆ ನೀಡಲಾಗುತ್ತದೆ ಎನ್ನುವ ಮಾತುಗಳೂ ಕೇಳಿಬಂದಿವೆ ಆದರೆ, ಲಿಂಗಾಯತ ಕೋಟಾದಲ್ಲಿ ಆಕಾಂಕ್ಷಿಗಳಾಗಿದ್ದ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ, ಹಾವೇರಿ ಸಂಸದ ಶಿವಕುಮಾರ್ ಉದಾಸಿ,ಬೀದರ್ ಸಂಸದ ಭಗವಂತ ಕೂಬಾ ಸೇರಿದಂತೆ ಕೊಪ್ಪಳ ಸಂಸದ ಕರಡಿ ಸಂಗಣ್ಣ, ಬೆಂಗಳೂರು ಕೇಂದ್ರ ಸಂಸದ ಪಿ.ಸಿ ಮೋಹನ್, ಬಾಗಲಕೋಟೆ ಸಂಸದ ಪಿಸಿ ಗದ್ದಿಗೌಡರ್, ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಮೈಸೂರು ಸಂಸದ ಪ್ರತಾಪ್ ಸಿಂಗ್ ಯಾವುದೇ ಆಕಾಂಕ್ಷಿಗಳಿಗೂ ಇನ್ನೂ ಕರೆ ಬಂದಿಲ್ಲ. ಹಾಗಾಗಿ ಸಚಿವ ಸ್ಥಾನದ ರೇಸ್ ನಿಂದ ಇವರೆಲ್ಲಾ ಬಹುತೇಕ ಹೊರಬಿದ್ದಂತಾಗಿದೆ ಎನ್ನಲಾಗುತ್ತಿದೆ. ಆದರೆ ದೂರವಾಣಿ ಕರೆ ಬಾರದೆ ಇದ್ದರೂ ಸಂಸದೆ ಶೋಭಾ ಕರಂದ್ಲಾಜೆ ದೆಹಲಿಗೆ ತೆರಳಿ ಕುತೂಹಲ ಮೂಡಿಸಿದ್ದಾರೆ.