ಬೆಂಗಳೂರು : 500 ಎಕರೆ ಜಮೀನು ಹೊಂದಿದ್ದಾರೆಂದು ನನ್ನ ಮೇಲೆ ಸುಳ್ಳು ಆರೋಪ ಮಾಡಿರುವ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದರೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಎಚ್ಚರಿಕೆ ನೀಡಿದ್ದಾರೆ.
500 ಎಕರೆ ಜಮೀನು ಹೊಂದಿದ್ದಾರೆ ಎಂದು ನನ್ನ ಮೇಲೆ ಆರೋಪ ಮಾಡಿರುವ ನಿಮಗೆ ಕಾನೂನೇ ಉತ್ತರ ಕೊಡುತ್ತದೆ. ಕಾನೂನಿನ ಆ ಕಬಂಧ ಬಾಹುಗಳಿಂದ ನೀವು ಮತ್ತು ನಿಮ್ಮ ಜೀ ಹುಜೂರ್ (ಗ್ರಾಮ ಪಂಚಾಯತ್ ಗೆಲ್ಲದ) ನಾಯಕರು ತಪ್ಪಿಸಿಕೊಳ್ಳಲಾರಿರಿ. ನನ್ನ ಸಾರ್ವಜನಿಕ ಜೀವನದಲ್ಲಿ ಇಂತಹ ಆರೋಪ ಮೊದಲೇನಲ್ಲ.
ಹಿಂದೆ ಕೆಲ ಬಾರಿ ನಿಮ್ಮಂತಹ ಪ್ರಚಾರ ಪ್ರಿಯರು ಮಾಧ್ಯಮಗಳ ಮುಂದೆ ಬಂದು ಠುಸ್ ಪಟಾಕಿ ಹಾರಿಸಿ ಹೋಗಿದ್ದಾರೆ. 'ಬರಿಗೈ' ತೋರಿಸಿ ಮಾಧ್ಯಮಗಳ ಮುಂದೆ ಪ್ರಚಾರ ಗಿಟ್ಟಿಸಿಕೊಳ್ಳಲು ತಾವು ಮಾಡಿರುವ ಆರೋಪಕ್ಕೆ ಕಾನೂನು ಮೂಲಕವೇ ಉತ್ತರ ಕೊಡಲು ಸಿದ್ಧನಾಗಿದ್ದೇನೆ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಬಂಡಲ್ ಬಡಾಯಿ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ನನ್ನ ಮೇಲೆ 500 ಎಕರೆ ಅಕ್ರಮ ಜಮೀನು ಹೊಂದಿದ್ದಾರೆಂದು ಆರೋಪ ಮಾಡಿದ್ದಾರೆ. ಅವರ ಬಳಿ ಇರುವ 500 ಎಕರೆ ಸಿ.ಟಿ.ರವಿಗೆ ಸೇರಿದ ಭೂಮಿಯ ದಾಖಲೆಗಳನ್ನು ತಂದು ಕೊಟ್ಟರೆ ಅದರಲ್ಲಿ ಅರ್ಧ ದಾನವಾಗಿ ಕೊಟ್ಟು ಬಿಡುತ್ತೇನೆ. ಎಂ.ಲಕ್ಷ್ಮಣ ಎಂಬ ಮಹಾನ್ ಸುಳ್ಳುಗಾರ ಮಾಧ್ಯಮಗಳ ಮುಂದೆ ಕುಳಿತರೆ ಸಾಕು ಸಾಕ್ಷಾತ್ ಸತ್ಯ ಹರಿಶ್ಚಂದ್ರನಂತೆ ಮಾತನಾಡುತ್ತಾರೆ.
ತಮ್ಮದೇ ಪಕ್ಷದ ನಾಯಕರ ಬೇನಾಮಿ ಆಸ್ತಿ ಬಗ್ಗೆ ಹೇಳುವ ಬದಲು ತಪ್ಪಾಗಿ ಲಕ್ಷ್ಮಣ ಅವರು ನನ್ನ ಹೆಸರು ಹೇಳಿದಂತಿದೆ. ಅಕ್ರಮ ಆಸ್ತಿ ಮಾಡಿ ಜೈಲಿಗೆ ಹೋಗಿ ಬಂದವರು ನಿಮ್ಮ ಪಕ್ಷದಲ್ಲೇ ಇರುವಾಗ ನನ್ನ ಮೇಲೆ ಅಕ್ರಮ ಆಸ್ತಿ ಆರೋಪ ಮಾಡುತ್ತಿದ್ದೀರಲ್ಲಾ ನಿಮಗೇನಾದರೂ ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಪಿಎಸ್ಐ ಅಕ್ರಮ ನೇಮಕಾತಿ : ಎಬಿವಿಪಿ ಮುಖಂಡ ಅರುಣ್‌ಕುಮಾರ್ ಪಾಟೀಲ ಬಂಧನ
ನನ್ನ ಸಾರ್ವಜನಿಕ ಜೀವನದಲ್ಲಿ 4 ಬಾರಿ ಚುನಾವಣೆಗೆ ನಿಂತು ಗೆದ್ದು ಶಾಸಕನಾಗಿದ್ದೇನೆ, ಸಚಿವನಾಗಿದ್ದೇನೆ. ಚುನಾವಣೆಗೆ ನಿಂತಾಗ ಚುನಾವಣಾಧಿಕಾರಿಗಳಿಗೆ ನನ್ನ ಆಸ್ತಿಯ ಕುರಿತು ಅಫಿಡವಿಟ್ ಸಲ್ಲಿಸಿದ್ದೇನೆ. 2004ರಲ್ಲಿ ಸಲ್ಲಿಸಿದ ಅಫಡವಿಟ್ 2021ರಲ್ಲಿ ಸಲ್ಲಿಸಿದ್ದ ಅಫಿಡವಿಟ್ಗೂ ಇರುವ ವ್ಯತ್ಯಾಸವನ್ನು ನೋಡಿ. ನಿಮ್ಮ ಪಕ್ಷದ ಮುಖಂಡರ ಆಸ್ತಿ ವ್ಯತ್ಯಾಸವನ್ನು ಗಮನಿಸಿ. ಆಗ ಕಳ್ಳರು ಯಾರು ಎನ್ನುವುದು ನಿಮಗೆ ಅರ್ಥವಾಗುತ್ತದೆ ಎಂದಿದ್ದಾರೆ.