ಬೆಂಗಳೂರು: ಕಡಿಮೆ ಬಡ್ಡಿ ದರದಲ್ಲಿ 100 ಕೋಟಿ ಲೋನ್ ಕೊಡುವುದಾಗಿ ನಂಬಿಸಿ ಉದ್ಯಮಿಯಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಯುವತಿಯರು ಸೇರಿದಂತೆ ನಾಲ್ವರು ವಂಚಕರನ್ನು ಹೆಚ್ಎಸ್ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಹರ್ಷಿಣಿ, ನಿವೇದಿತಾ ಹಾಗೂ ನಂದನ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ತಮಿಳುನಾಡು ಮೂಲದ ಕತ್ರಿವೇಲು ಎಂಬಾತ ಕಳೆದ ಅಕ್ಟೋಬರ್ನಲ್ಲಿ ಹೆಚ್ಎಸ್ಆರ್ ಲೇಔಟ್ನಲ್ಲಿ ಫ್ಯೂಚರ್ ಕ್ರೈಸ್ ಫೈನಾನ್ಸ್ ಕಂಪನಿ ಆರಂಭಿಸಿದ್ದ. ಬಳಿಕ ಬೆಂಗಳೂರು ಮೂಲದ ಇಬ್ಬರು ಸೇರಿದಂತೆ ಒಟ್ಟು 11 ಮಂದಿಯನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದ.
ಇದನ್ನೂ ಓದಿ: ರಾಜ್ಯದಲ್ಲಿ ಸದ್ಯಕ್ಕೆ ನೈಟ್ ಕರ್ಫ್ಯೂ ಜಾರಿ ಮಾಡುವುದಿಲ್ಲ: ಸಿಎಂ ಬೊಮ್ಮಾಯಿ
ಸಾಲಕ್ಕಾಗಿ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಿ ತಿರಸ್ಕೃತಗೊಳ್ಳುವ ಗ್ರಾಹಕರನ್ನೇ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದ ಆರೋಪಿಗಳು ಶೇ.6 ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ಭರವಸೆ ನೀಡುತ್ತಿದ್ದರು. ಇವರ ಮಾತು ನಂಬಿ ಜನರು ಅರ್ಜಿ ಹಾಕುತ್ತಿದ್ದರು. ಮುಂಗಡ ಶುಲ್ಕ ಹೆಸರಿನಲ್ಲಿ ಗ್ರಾಹಕರಿಂದ ಹಣ ಪಡೆದುಕೊಂಡು ವಂಚಿಸುತ್ತಿದ್ದರು.
ಇದೇ ರೀತಿಯಾಗಿ ಆಂಧ್ರ ಮೂಲದ ಕೃಷ್ಣರಾಜು ಎಂಬಾತನನ್ನು ಸಂಪರ್ಕಿಸಿದ ಆರೋಪಿಗಳು ಕಡಿಮೆ ಬಡ್ಡಿದರದಲ್ಲಿ 100 ಕೋಟಿ ರೂಪಾಯಿ ಸಾಲ ನೀಡುವುದಾಗಿ ನಂಬಿಸಿದ್ದರು. ಮುಂಗಡವಾಗಿ 100 ಕೋಟಿಗೆ 1.81 ಕೋಟಿ ರೂ.ಬಡ್ಡಿ ಹಣ ಪಡೆದು ನಾಪತ್ತೆಯಾಗಿದ್ದಾನೆ.
ವಂಚನೆ ಬೆಳಕಿಗೆ ಬರುತ್ತಿದ್ದಂತೆ ಮುಖ್ಯ ಆರೋಪಿ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಆತನ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ನಗರ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವನ್ ಜೋಷಿ ತಿಳಿಸಿದ್ದಾರೆ.