ನವದೆಹಲಿ: ಬಿಎಸ್ವೈ ಹಾಗೂ ಅವರ ಕುಟುಂಬದವರ ಮೇಲೆ ಬಂದಿರುವ 12ಕೋಟಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಮಾಜಿ ಸಿಎಂ ಯಡಿಯೂರಪ್ಪ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ಇಂದು ವಿಶೇಷ ರಜೆ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿಕೆ ಮಾಡಿದೆ.
ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಅವರು ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್, ಸೆಪ್ಟೆಂಬರ್ 7 ರಂದು ಅರ್ಜಿದಾರರ ವಾದವನ್ನು ಎತ್ತಿ ಹಿಡಿದಿತ್ತು. ಅಷ್ಟೇ ಅಲ್ಲ ಪ್ರಕರಣದ ವಿಚಾರಣೆಗೆ ಅವಕಾಶ ನೀಡುವಂತೆ ಜನಪ್ರತಿನಿಧಿಗಳ ಕೋರ್ಟ್ಗೆ ನಿರ್ದೇಶನ ನೀಡಿತ್ತು.
ಯಡಿಯೂರಪ್ಪ ಹಾಗೂ ಅವರ ಮಗ ಬಿವೈ ವಿಜಯೇಂದ್ರ ಮತ್ತು ಇತರ ಕುಟುಂಬ ಸದಸ್ಯರನ್ನು ಆರೋಪಿಗಳೆಂದು ಪರಿಗಣಿಸುವಂತೆ ಸೂಚನೆ ನೀಡಿತ್ತು. ಖಾಸಗಿ ದೂರನ್ನು ಮಾನ್ಯ ಮಾಡಿ ವಿಚಾರಣೆಗೆ ಅವಕಾಶ ನೀಡುವಂತೆ ವಿಶೇಷ ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕರ್ನಾಟಕದ ಚುನಾಯಿತ ಸಂಸದರು ಮತ್ತು ಶಾಸಕರಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದ ವಿಶೇಷ ನ್ಯಾಯಾಲಯ, ಪ್ರಕರಣದ ತನಿಖೆ ನಡೆಸಿ ನವೆಂಬರ್ 2, 2022 ರೊಳಗೆ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿತ್ತು. ವಿಶೇಷ ನ್ಯಾಯಾಲಯದ ಆದೇಶದಂತೆ ಲೋಕಾಯುಕ್ತ ಪೊಲೀಸರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೈಕೋರ್ಟ್ ಹಾಗೂ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.
ಇದನ್ನು ಓದಿ:ಡಿಕೆಶಿ ವಿರುದ್ಧದ ತೆರಿಗೆ ವಂಚನೆ ಪ್ರಕರಣ: ಹೈಕೋರ್ಟ್ ಅವಲೋಕನಗಳಿಗೆ ಮಧ್ಯಂತರ ತಡೆ, ಸುಪ್ರೀಂನಿಂದ ನೋಟಿಸ್ ಜಾರಿ