ಬೆಂಗಳೂರು: ಸಾಹಿತಿ ಚಿದಾನಂದ ಮೂರ್ತಿ ನಿಧನದ ಹಿನ್ನೆಲೆ ಸಿಎಂ ಯಡಿಯೂರಪ್ಪ ಅವರು ಅಂತಿಮ ದರ್ಶನ ಪಡೆದರು.
ನಂತರ ಮಾತಾನಾಡಿದ ಸಿಎಂ, ಹಿರಿಯ ವಿದ್ವಾಂಸ, ಇತಿಹಾಸಕಾರ, ಸಂಶೋಧಕರನ್ನು ನಾಡು ಕಳೆದುಕೊಂಡಿದೆ. ಕನ್ನಡ ನಾಡು-ನುಡಿಯ ಅಸ್ಮಿತೆಗಾಗಿ ಹೋರಾಡಿದ ಚಿದಾನಂದ ಮೂರ್ತಿ ಅಗಲಿಕೆ ನೋವುಂಟು ಮಾಡಿದೆ. ನಾನು ಒಮ್ಮೆ ವಿಧಾನ ಪರಿಷತ್ ಸದಸ್ಯರಾಗಿ ಅಂತಾ ಹೇಳಿದ್ದೆ. ಆದರೆ, ಅವರು ವಯಸ್ಸಾಯ್ತು ಅಂತಾ ಅದನ್ನು ಒಪ್ಪಿರಲಿಲ್ಲ. ಬದುಕಿನುದ್ದಕ್ಕೂ ಅವರು ಸಾಹಿತ್ಯಿಕ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದರು. ಹಂಪಿ ಸ್ಮಾರಕದ ಬಗ್ಗೆ ಅವರಿಗೆ ಭಾವನಾತ್ಮಕ ಸಂಬಂಧವಿತ್ತು. ನೇರ ನುಡಿಯ ವ್ಯಕ್ಯಿಯಾಗಿದ್ರು ಅಂತಾ ಸಿಎಂ ಗುಣಗಾನ ಮಾಡಿದರು.
ನಾಳೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ಕಾರ್ಯ ನಡೆಸಲಾಗುವುದು ಎಂದ ಸಿಎಂ, ಚಿದಾನಂದ ಮೂರ್ತಿ ಅವರ ಪತ್ನಿ ಮತ್ತು ಮಗನಿಗೂ ಸಾಂತ್ವನ ಹೇಳಿದರು.