ಬೆಂಗಳೂರು: ಹೊಸ ಆಯಾಮ, ಸಂಶೋಧನೆಗಳ ಮೂಲಕ ಬೆಂಗಳೂರಿನಲ್ಲಿ ಶ್ರೇಷ್ಠ ತಾಂತ್ರಿಕ ಬೆಂಬಲ ವ್ಯವಸ್ಥೆಯನ್ನು ರೂಪಿಸುವಂತೆ ಬಾಷ್ ಸಂಸ್ಥೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.
ಆಡುಗೋಡಿಯಲ್ಲಿ ನಿರ್ಮಿಸಿರುವ ಬಾಷ್ ಸ್ಮಾರ್ಟ್ ಕ್ಯಾಂಪಸ್ ಉದ್ಘಾಟಿಸಿ ಮಾತನಾಡಿ, ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಪ್ರಧಾನಿ ಮೋದಿಯವರು ಶಿಕ್ಷಣ, ಆರೋಗ್ಯ, ಉತ್ಪಾದನೆ, ಸಂಶೋಧನೆ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಮುಂದಿನ 25 ವರ್ಷಗಳು ಬಹಳ ಪ್ರಮುಖವಾಗಿದ್ದು, ಈ ಅವಧಿಯಲ್ಲಿ ಆರ್ಥಿಕ ಬೆಳವಣಿಗೆ, ಸಮೃದ್ಧತೆ, ಜನರ ಜೀವನಮಟ್ಟ ಸುಧಾರಣೆ, ಉತ್ತಮ ಪರಿಸರ, ಪರಿಸರ ಮತ್ತು ಉದ್ಯಮಗಳ ಸಂಯೋಜನೆಗೆ ಸಾಧಿಸಬೇಕಾಗಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನ ತನ್ನ ಛಾಪು ಮೂಡಿಸಿರುವ ಬಾಷ್ ಸಂಸ್ಥೆ ಮೇಲ್ಪಂಕ್ತಿ ಹಾಕಬೇಕು ಎಂದು ತಿಳಿಸಿದರು.
ಸಂಸ್ಕೃತಿಯಾಗಿ ಬೆಳೆದ ಬಾಷ್ ಸಂಸ್ಥೆ: ಬಾಷ್ ಕಂಪನಿ ಯುವ ಇಂಜಿನಿಯರ್ಸ್‍ಗಳ ಕನಸಿನ ಸಂಸ್ಥೆ. ನಾನು ಇಂಜಿನಿಯರ್ ಕಾಲೇಜಿನಲ್ಲಿದ್ದಾಗ ಟಾಟಾ ಮೋಟರ್ಸ್, ಬಾಷ್ನಂತಹ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಕನಸು ಕಂಡಿದ್ದೆ. ಇದು ಕೇವಲ ಉತ್ಪಾದನಾ ಅಥವಾ ಸಾಫ್ಟ್‌ವೇರ್ ಕಂಪನಿಯಲ್ಲ, ಬಾಷ್ ಒಂದು ಸಂಸ್ಕೃತಿಯಾಗಿ ಬೆಳೆದಿದೆ. ಬದ್ಧತೆ, ಸಮರ್ಪಣೆ, ಪರಿಶ್ರಮಗಳಿಂದ ಇದು ಸಾಧ್ಯವಾಗಿದೆ ಎಂದರು.
ಎಥನಾಲ್ನಲ್ಲಿ ರಾಜ್ಯ ಮುಂದೆ: ಬೆಂಗಳೂರು ತನ್ನ ಪರಿಶ್ರಮದಿಂದ ತಾಂತ್ರಿಕ ಹಬ್ ಆಗಿದೆ. ಹಿಂದಿನಿಂದಿಲೂ ರಾಜ್ಯ ಹಾಗೂ ಕೇಂದ್ರ ಪಿಎಸ್‍ಯುಗಳ ತಾಂತ್ರಿಕತೆ, ಸಂಶೋಧನೆಗಳು, ಬೆಂಗಳೂರು ನಗರವನ್ನು ಐಟಿಬಿಟಿ ನಗರವಾಗಲು ಮಹತ್ವದ ಕೊಡುಗೆಯನ್ನು ನೀಡುತ್ತಾ ಬಂದಿವೆ. ಜೆನಿಟಿಕ್ಸ್ನಿಂದ ಬಾಹ್ಯಾಕಾಶ ಕ್ಷೇತ್ರದವರೆಗೆ 400 ವಿಶ್ವಮಟ್ಟದ ಸಂಶೋಧನಾ ಕೇಂದ್ರಗಳು ಬೆಂಗಳೂರಿನಲ್ಲಿವೆ.
400 ಫಾರ್ಚೂನ್ ಕಂಪನಿಗಳು ಇಲ್ಲಿವೆ. ಏರೋಸ್ಪೇಸ್, ನವೀಕರೀಸಬಹುದಾದ ಇಂಧನ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಸೆಮಿಕಂಡಕ್ಟರ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗುತ್ತಿದೆ. ಎಥನಾಲ್ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಹೈಡ್ರೋಜನ್ ಇಂಧನದ ಉತ್ಪಾದನೆಗೆ ಒತ್ತು ನೀಡಲಾಗಿದ್ದು, ಸಮುದ್ರದ ನೀರಿನಿಂದ ಅಮೋನಿಯಾ ಉತ್ಪಾದನೆಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದರು.
ಬಾಷ್ ಸಂಸ್ಥೆಯ ಯೋಜನೆಗಳಿಗೆ ರಾಜ್ಯ ಸರ್ಕಾರ ಹೆಗಲಿಗೆ ಹೆಗಲು ನೀಡಲಿದೆ. ಬಾಷ್ ಸಂಸ್ಥೆಯ ವಿಶ್ವಮಟ್ಟದ ಸಂಶೋಧನಾ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿ. ಬಾಷ್‍ನ ಸ್ಮಾರ್ಟ್ ಕ್ಯಾಂಪಸ್ ಪರಿಸರ ಸ್ನೇಹಿಯಾಗಿದೆ ಎಂದರು.
ಇದನ್ನೂ ಓದಿ: 2023ರ ಚುನಾವಣೆಯಲ್ಲಿ ಕಾಂಗ್ರೆಸ್ಗೆ 130 ಸ್ಥಾನ ಖಚಿತ: ಸಿದ್ದರಾಮಯ್ಯ