ದೇವನಹಳ್ಳಿ(ಬೆಂಗಳೂರು): ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಸ್ಫೋಟಿಸುವ ಬೆದರಿಕೆ ಹಾಕಿದ ಆರೋಪಿ ಪಶ್ಚಿಮ ಬಂಗಾಳ ಮೂಲದ ಸುಭಾಷ್ ಗುಪ್ತಾ ಎಂಬಾತನನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಇಂದು ಮುಂಜಾನೆ 3:30ರ ಸಮಯದಲ್ಲಿ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿದ್ದ ಈತ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದ.
ಮಾಹಿತಿ ತಿಳಿದ ತಕ್ಷಣ ಬೆದರಿಕೆ ಕರೆಯ ಜಾಡು ಬೆನ್ನತ್ತಿದ್ದ ಪೊಲೀಸರು ಆರೋಪಿ ಸುಭಾಷ್ ಗುಪ್ತಾನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಬೆದರಿಕೆ ಕರೆಯ ಅಸಲಿಯತ್ತು ಬಾಯ್ಬಿಟ್ಟಿದ್ದಾನೆ. ತನ್ನ ವಿಚ್ಛೇದಿತ ಅಕ್ಕನ ಗಂಡನ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾವನ ಮೇಲಿನ ಸೇಡಿಗೆ ಆರೋಪಿಯು ಆತನ ಹೆಸರಿನಲ್ಲಿ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿ ಬೆದರಿಸಿದ್ದಾನೆ. ಈ ಕರೆಯಿಂದ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ತಕ್ಷಣ ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳ ಮತ್ತು ಸಿಐಎಸ್ಎಫ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿ: ಐಸಿಸ್ ಉಗ್ರ ಸಂಘಟನೆಗೆ ಯುವಕರ ಸೇರಿಸಲು ಬೆಂಗಳೂರಲ್ಲಿ ನಡೆದಿತ್ತು ಭರ್ಜರಿ ಸಿದ್ಧತೆ!