ಬೆಂಗಳೂರು: ಎಂಎಂ ಫುಡ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಬಾಯ್ಲರ್ ಸ್ಫೋಟ ಪ್ರಕರಣಕ್ಕೆ ಸಂಭವಿಸಿದಂತೆ ಮತ್ತಿಬ್ಬರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ ನಾಲ್ಕಕ್ಕೇರಿದೆ.
ಫ್ಯಾಕ್ಟರಿ ಪಾಲುದಾರ ಸಚಿನ್ ಹಾಗೂ ಕೆಲಸ ಮಾಡುತ್ತಿದ್ದ ಧನಲಕ್ಷ್ಮಿ ಎಂಬುವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ನಿನ್ನೆಯಷ್ಟೇ ಮನೀಶ್ ಹಾಗೂ ಸೌರವ್ ಎಂಬುವರು ಸಜೀವ ದಹನಗೊಂಡಿದ್ದರು. ಮತ್ತೊಬ್ಬ ಗಾಯಾಳು ಶಾಂತಿ ಎಂಬಾಕೆಯ ಸ್ಥಿತಿ ತೀರಾ ಗಂಭೀರಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಯ್ಲರ್ ಉಷ್ಣತೆ ಹೆಚ್ಚಾಗಿದ್ದರಿಂದ ಸ್ಫೋಟ ಸಂಭವಿಸಿದೆ ಎಂದು ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಂಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ತನಿಖೆ ವರದಿ ನೀಡಲಿದ್ದು, ಬಾಯ್ಲರ್ ಸ್ಫೋಟಕ್ಕೆ ಕಾರಣವೇನೆಂಬುದು ತಿಳಿದುಬರಲಿದೆ.
ಸಂಬಂಧಪಟ್ಟ ಇಲಾಖೆಗಳಿಂದ ಕಾರ್ಖಾನೆ ಪಡೆದಿರಬಹುದಾದ ಪರವಾನಗಿ ಹಾಗೂ ಇನ್ನಿತರ ದಾಖಲಾತಿಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಕಾರ್ಖಾನೆ ಮಾಲೀಕ ವಿಜಯ್ ಮೆಹ್ತಾ ನಾಪತ್ತೆಯಾಗಿದ್ದು, ಈತನಿಗಾಗಿ ಮಾಗಡಿ ರೋಡ್ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಫುಡ್ ಫ್ಯಾಕ್ಟರಿಯಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣ..ಇಬ್ಬರ ಸಾವು, ಮೂವರ ವಿರುದ್ಧ ಪ್ರಕರಣ ದಾಖಲು