ನೆಲಮಂಗಲ: ಕರ್ತವ್ಯಕ್ಕೆ ಹಾಜರಾಗಿ ಬಸ್ ಚಾಲನೆ ಮಾಡುತ್ತಿದ್ದ ಬಿಎಂಟಿಸಿ ಚಾಲಕನ ಮೇಲೆ ಪ್ರತಿಭಟನಾನಿರತ ಸಾರಿಗೆ ನೌಕರರ ಕುಟುಂಬಸ್ಥರು ಹಲ್ಲೆ ನಡೆಸಿದ ಘಟನೆ ತಾಲೂಕಿನ ಅರಿಶಿನಕುಂಟೆ ಬಳಿ ನಡೆದಿದೆ.
ಇಂದು ಸಾರಿಗೆ ನೌಕರರು 6ನೇ ವೇತನ ಆಯೋಗದ ಜಾರಿಗೆ ಆಗ್ರಹಿಸಿ 'ಲೋಟ ತಟ್ಟೆ ಚಳವಳಿ' ಹಮ್ಮಿಕೊಂಡಿದ್ದಾರೆ. ನೆಲಮಂಗಲ ತಾಲೂಕು ಕಚೇರಿ ಮುಂದೆ ಜಮಾಯಿಸಿದ್ದ ನೌಕರರು ಪ್ರತಿಭಟನೆ ನಡೆಸಿ, ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು. ಈ ವೇಳೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ಸಾರಿಗೆ ನೌಕರರ ಕುಟುಂಬಸ್ಥರು ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಈ ಸಮಯದಲ್ಲಿ ಅರಿಶಿನಕುಂಟೆ ಬಳಿ ಬಿಎಂಟಿಸಿ ಬಸ್ ಪ್ರತಿಭಟನಾಕಾರರ ಕಣ್ಣಿಗೆ ಬಿದ್ದಿದೆ. ಯೂನಿಫಾರ್ಮ್ ಹಾಕಿಕೊಳ್ಳದೆ ಡ್ರೈವರ್ ಬಸ್ ಚಾಲನೆ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಖಾಸಗಿ ಚಾಲಕನಿರಬಹುದು ಎಂದು ತಿಳಿದ ಪ್ರತಿಭಟನಾನಿರತ ಮಹಿಳೆಯರು ಚಾಲಕನಿಗೆ ಬಸ್ನಲ್ಲಿಯೇ ಗೂಸಾ ಕೊಟ್ಟು ಎಳೆದಾಡಿದ್ದಾರೆ. ಬಸ್ನಿಂದ ಹೊರಗೆಳೆದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಡಿದು ಬಸ್ ಚಾಲನೆ ಮಾಡಿದ ಆರೋಪದಡಿ ಥಳಿತ
ಚಾಲಕ ಮದ್ಯ ಸೇವನೆ ಮಾಡಿ ಬಸ್ ಚಲಾಯಿಸುತ್ತಿದ್ದ. ಅದಕ್ಕಾಗಿ ಬಸ್ನಲ್ಲಿದ್ದ ಪ್ರಯಾಣಿಕರು ಥಳಿಸಿದ್ದಾಗಿ ತಿಳಿದು ಬಂದಿದೆ. ಸದ್ಯ ತನಿಖೆ ನಂತರವಷ್ಟೇ ಸತ್ಯಾಸತ್ಯತೆ ಬಯಲಿಗೆ ಬರಲಿದೆ.
ಹಲ್ಲೆ ಮಾಡಿದವರನ್ನ ವಶಕ್ಕೆ ಪಡೆದ ಪೊಲೀಸ್
ಘಟನೆ ಅರಿಶಿನಕುಂಟೆಯ ಡಿಪೋ 9ರಲ್ಲಿ ನಡೆದಿದ್ದು, ಬಸ್ ನಂ. ಎಫ್ -106, ರೂಟ್ 256C/1. ಎಂದು ತಿಳಿದು ಬಂದಿದೆ. ಹಲ್ಲೆಗೊಳಗಾದ ಚಾಲಕನ ಹೆಸರು ಗಿರೀಶ್ ಮತ್ತು ಕಂಡಕ್ಟರ್ ಹೆಸರು ಚನ್ನಕೇಶವ ಮೂರ್ತಿ. ಸದ್ಯ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹಲ್ಲೆ ಮಾಡಿದವರನ್ನ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.