ಬೆಂಗಳೂರು: ಸಾಂಕ್ರಾಮಿಕ ಕೊರೊನಾ ಸೋಂಕಿನ ಕಾರಣದಿಂದಾಗಿ ಮೆಟ್ರೋ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಮೆಟ್ರೋ ಫೇಸ್- 2 ಕಾಮಗಾರಿ 2024ಕ್ಕೆ ಮುಗಿಸುವಂತೆ ಸಿಎಂ ಡೆಡ್ಲೈನ್ ಕೂಡ ಕೊಟ್ಟಿದ್ದಾರೆ. ಇದಕ್ಕಾಗಿ ನಮ್ಮ ಮೆಟ್ರೋ ಟೀಂ ದಿನದ 24 ಗಂಟೆಯೂ ಕಾಮಗಾರಿ ಕೆಲಸಗಳನ್ನು ನಡೆಸುತ್ತಿದೆ. ಆದರೆ, ಇದೀಗ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆ ರಾತ್ರಿ ಕಾಮಗಾರಿಗಳಿಗೆ ಬ್ರೇಕ್ ಹಾಕಲಾಗಿದೆ.
ಮುಖ್ಯವಾಗಿ ರಾತ್ರಿ ಸಮಯದಲ್ಲಿ ಕಾಮಗಾರಿ ನಡೆಸುತ್ತಿರುವುದು ಜನರ ನಿದ್ರೆಗೆ ತೊಂದರೆ ಆಗುತ್ತಿದ್ದರೆ, ಇತ್ತ ಸಾಲು ಸಾಲು ಪರೀಕ್ಷೆಗಳು ಸಮೀಸುತ್ತಿರುವುದರಿಂದ ಮಕ್ಕಳ ಓದಿಗೂ ಕಿರಿಕಿರಿಯನ್ನುಂಟು ಮಾಡಿದೆ. ಹೀಗಾಗಿ ಸಿಲ್ಕ್ ಬೋರ್ಡ್- ಕೆ.ಆರ್.ಪುರ ಕಾಮಗಾರಿ ಸೇರಿದಂತೆ ಬಹುತೇಕ ಎಲ್ಲೆಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆಯೋ ಅಲ್ಲಿ ರಾತ್ರಿ ಸಮಯದ ಕೆಲಸವನ್ನು ನಿಲ್ಲಿಸಲಾಗಿದೆ. ಮೆಟ್ರೋ ಪಿಲ್ಲರ್ ಅಳವಡಿಕೆಗಾಗಿ ಮಣ್ಣು ಕೊರೆಯುವಾಗ ಹೆಚ್ಚು ಶಬ್ದ ಬರುತ್ತಿದ್ದು, ಇದನ್ನು ಬೆಳಗ್ಗೆ ನಡೆಸಲು, ರಾತ್ರಿ ಸಮಯ ಸಾಮಗ್ರಿಗಳ ಸಾಗಣೆ ಚಟುವಟಿಕೆಗಳಿಗೆ ಮೀಸಲಿಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವಜ್, ಮೆಟ್ರೋ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಸಾರ್ವಜನಿಕರಿಂದ ಫೋನ್ ಕರೆಗಳ ಮೂಲಕ ಸಾಕಷ್ಟು ದೂರುಗಳು ಬಂದವು. ಮನೆಯಲ್ಲಿ ಮಕ್ಕಳು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಜೊತೆಗೆ ವಯಸ್ಸಾಗಿರುವ ತಂದೆ ತಾಯಿ ಇದ್ದು, ಅವರಿಗೆ ನಿದ್ರಾಭಂಗವಾಗುತ್ತಿದೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆ ಅವರಲ್ಲೇ ಸಮಯ ನಿಗದಿ ಮಾಡುವಂತೆ ಕೇಳಿಕೊಂಡಿದ್ದೆವು.
ಸಾರ್ವಜನರಿಕರು ರಾತ್ರಿ 10 ಗಂಟೆ ತನಕ ಕಾಮಗಾರಿ ನಡೆಸುವಂತೆ ಸಲಹೆ ನೀಡಿದ್ದಾರೆ. ಹೀಗಾಗಿ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10ರ ತನಕ ಕಾಮಗಾರಿ ನಡೆಸಲಾಗುತ್ತೆ. ಇದಕ್ಕಾಗಿ ನಗರ ಟ್ರಾಫಿಕ್ ಪೊಲೀಸ್ ಆಯುಕ್ತರಿಗೂ ಸಾಮಗ್ರಿ ಸಾಗಾಟಕ್ಕೆ ಬೆಳಗ್ಗೆಯೂ ಅವಕಾಶ ಕೊಡುವಂತೆ ಕೇಳಿದ್ದೆವು. ಅವರು ಕೂಡ ಅದಕ್ಕೆ ಸಮ್ಮತಿಸಿದ್ದಾರೆ. ಜನರಿಗೆ ಅನಾವಶ್ಯಕ ತೊಂದರೆ ಆಗದೇ ಕಾಮಗಾರಿ ನಡೆಸಲಾಗುತ್ತಿದ್ದು, ಆದಷ್ಟು ಬೇಗ ಮುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.