ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಕಪ್ಪು ಶಿಲೀಂಧ್ರ ಚಿಕಿತ್ಸೆಯ ದರವನ್ನು ಸರ್ಕಾರದಿಂದಲೇ ನಿಗದಿಪಡಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಹಾಗೂ ಸಿ.ವಿ.ರಾಮನ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಸಚಿವರು, 15 ದಿನಗಳ ಹಿಂದೆ ಇದ್ದ ಬ್ಲ್ಯಾಕ್ ಫಂಗಸ್ ಔಷಧಿ ಕೊರತೆ ಈಗ ಇಲ್ಲ. ಕೇಂದ್ರದಿಂದ ದೊಡ್ಡ ಪ್ರಮಾಣದಲ್ಲಿ ಔಷಧಿ ಬಂದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಚಿಕಿತ್ಸೆಗಳನ್ನು ಉಚಿತಗೊಳಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕಪ್ಪು ಶಿಲೀಂಧ್ರದ ಚಿಕಿತ್ಸೆಗೆ ನಿರ್ದಿಷ್ಟ ದರ ನಿಗದಿಪಡಿಸಬೇಕಿದೆ. ಬೇಕಾದ ಹಾಗೆ ಹೆಚ್ಚು ಹಣ ಪಡೆಯುವಂತಿಲ್ಲ. ಇದಕ್ಕಾಗಿ ದರ ನಿಗದಿಪಡಿಸಲಾಗುವುದು. ಚಿಕಿತ್ಸಾ ವೆಚ್ಚಕ್ಕೂ ಸಹ ದರ ನಿಗದಿ ಮಾಡಲಾಗುವುದು ಎಂದರು.

ಸಿಎಸ್ಆರ್ ಚಟುವಟಿಕೆಯಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆ ಅಳವಡಿಸಲಾಗಿದೆ. ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ 24 ಹಾಸಿಗೆಗಳ ಐಸಿಯು ಘಟಕ ಆರಂಭಿಸಲಾಗಿದೆ. ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ 77 ಹಾಸಿಗೆಗಳ ಐಸಿಯು, ಆಕ್ಸಿಜನ್ ಹಾಸಿಗೆ ಅಳವಡಿಸಲಾಗಿದೆ. ಜೊತೆಗೆ ಡಿಆರ್ಡಿಒ ಸಂಶೋಧಿಸಿದ 1 ಸಾವಿರ ಲೀಟರ್ ಆಕ್ಸಿಜನ್ ಘಟಕವನ್ನು ಅಳವಡಿಸಲಾಗಿದೆ. ಇದು ವಾತಾವರಣದಿಂದ ಆಕ್ಸಿಜನ್ ಪಡೆದು 100 ಹಾಸಿಗೆಗಳಿಗೆ ಪೂರೈಕೆ ಮಾಡುತ್ತದೆ. ಇದನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಒಂದೇ ಭಾಗದಲ್ಲಿ ಹೆಚ್ಚು ಆಕ್ಸಿಜನ್, ಐಸಿಯು ವ್ಯವಸ್ಥೆ ಲಭ್ಯವಿದೆ. ಕೋವಿಡ್ ಪ್ರಕರಣ ಕಡಿಮೆಯಾದರೂ ಸಿದ್ಧತೆಗಳನ್ನು ಮಾಡಿಕೊಂಡಿರಬೇಕಾಗುತ್ತದೆ. ಸಿದ್ಧತೆಗಳನ್ನು ಮಾಡಿಕೊಳ್ಳುವುದು ರಾಜ್ಯ ಸರ್ಕಾರದ ಗಂಭೀರ ಚಿಂತನೆ. ಆ ನಿಟ್ಟಿನಲ್ಲಿ ಆಸ್ಪತ್ರೆಗಳ ಮೂಲಸೌಕರ್ಯ ಹೆಚ್ಚಿಸಲಾಗಿದೆ ಎಂದರು.