ಬೆಂಗಳೂರು: ರಾವಣನ ಸೇನೆಯನ್ನು ವಧೆ ಮಾಡಿದ್ದು ವಾನರ ಸೇನೆ, ಕೊರೊನಾವನ್ನು ವಧೆ ಮಾಡೋದು ಬಿಜೆಪಿ ಸೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ಆರೋಗ್ಯ ಸ್ವಯಂ ಸೇವಕರ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋದಿ ಇಲ್ಲದೇ ಇದ್ದರೆ ಕೋವಿಡ್ನಿಂದ ಬಹಳಷ್ಟು ಹಾನಿ ದೇಶದಲ್ಲಿ ಆಗುತ್ತಿತ್ತು ಎಂದರು.
ಮೊದಲ ಅಲೆ ಬಂದಾಗ ಆರೋಗ್ಯ ಮೂಲ ಸೌಕರ್ಯಗಳು ಇರಲಿಲ್ಲ. ಅದು ಕಾಂಗ್ರೆಸ್ ಆಳ್ವಿಕೆಯ ಕಾಣಿಕೆ, ಒಂದು ಮಾಸ್ಕ್ ತಯಾರಿಸೋಕೂ ಆಗಿರಲಿಲ್ಲ. ಆದರೆ ಈಗ ಇಡೀ ಪ್ರಪಂಚಕ್ಕೆ ನಾವು ವ್ಯಾಕ್ಸಿನ್ ನೀಡಿದ್ದೇವೆ. ಮೋದಿ ತೆಗೆದುಕೊಳ್ಳುವ ಪ್ರತಿ ನಿರ್ಣಯದ ಹಿಂದೆ ಒಂದು ಗುರಿ ಇರುತ್ತದೆ. ಸುಮ್ಮನೆ ಪ್ರಚಾರಕ್ಕೆ ಮಾತ್ರ ಮೋದಿ ಯೋಜನೆ ಮಾಡೋದಿಲ್ಲ. ನಮ್ಮದು ಸೇವೆ, ಬೇರೆ ಪಕ್ಷದವರದ್ದು ಸ್ವಾರ್ಥ. ಬೇರೆ ಪಕ್ಷದವರನ್ನ ನಾನು ಹತ್ತಿರದಿಂದ ನೋಡಿದ್ದೇನೆ. ಅವರ ಚರ್ಚೆಯ ಸುತ್ತ ಸ್ವಾರ್ಥವೇ ಇರುತ್ತದೆ. ಆದರೆ, ನಮ್ಮ ಕಾರ್ಯಕರ್ತರು ಸೇವಾ ತುಡಿತದ ಮನೋಭಾವನೆ ಹೊಂದಿದ್ದಾರೆ. ಇದೇ ನಮ್ಮ ಶಕ್ತಿ ಎಂದರು.
ಕಾಂಗ್ರೆಸ್ನವರಿಗೆ ನಮ್ಮ ತರಹದ ಕಾರ್ಯಕ್ರಮ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ನಲ್ಲಿ ಎಲ್ಲರೂ ನಾಯಕರೇ. ಅಧಿಕಾರ ಬಂದಾಗ ಕಬ್ಬಿಣ ಇದ್ದಂಗೆ ಇರ್ತಾರೆ. ಅಧಿಕಾರ ಹೋದ್ರೆ ಹತ್ತಿ ಇದ್ದಂಗೆ ಇರ್ತಾರೆ ಎಂದು ಟೀಕಿಸಿದರು.
ಬೇರೆ ಪಕ್ಷಗಳಲ್ಲಿ ಬರೀ ಸ್ವಾರ್ಥದ ರಾಜಕಾರಣ ಇರುತ್ತದೆ. ಆದರೆ, ಬಿಜೆಪಿಯಲ್ಲಿ ಏನಿದ್ರು ಜನರ ಸೇವೆ ಅಷ್ಟೇ. ನಾನು ಬಿಜೆಪಿಗೆ ಬರೋಕೂ ಮುನ್ನ ಬೇರೆ ಪಕ್ಷದಲ್ಲಿದ್ದೆ. ಆವಾಗ ಅಲ್ಲಿ ನನಗೆ ಕಾಣಿಸಿದ್ದು ಬರೀ ಸ್ವಾರ್ಥ ರಾಜಕಾರಣ ಎಂದು ಜೆಡಿಎಸ್ ಪಕ್ಷಕ್ಕೆ ಪರೋಕ್ಷ ತಿರುಗೇಟು ನೀಡಿದರು.
ಕೋವಿಡ್ ಮೂರನೇ ಅಲೆ ಹಿನ್ನೆಲೆ ಇವಾಗ್ಲಿಂದಲೇ ಕಠಿಣ ನಿರ್ಧಾರ ಮಾಡಿದ್ದೇವೆ. ಜನರು ಎಲ್ಲರೂ ಸಹಕಾರ ಕೊಡಬೇಕು. ಗಡಿ ಪ್ರದೇಶಗಳಲ್ಲಿ ಮಾತ್ರ ಕಠಿಣ ನಿರ್ಬಂಧ ಮಾಡಿದ್ದೇವೆ. ಹಿಂದೆ ಕೊರೋನಾ ಜಾಸ್ತಿಯಾದಾಗ ಲಾಕ್ ಡೌನ್ ಮಾಡಿದ್ವಿ. ಹೀಗಾಗಿ ಮತ್ತೆ ಆ ರೀತಿ ಆಗಬಾರದು ಅನ್ನೋ ಕಾರಣಕ್ಕೇ ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮ ಕೈಗೊಂಡಿದ್ದೇವೆ. ಇದರಿಂದ ಜನರಿಗೆ ಏನು ತೊಂದರೆ ಆಗುವುದಿಲ್ಲ. ಹೀಗಾಗಿ ಜನರು ಇದಕ್ಕೆ ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.
ಕೊರೊನಾ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಂತಹ ಸವಾಲಿಗೂ ನಾವು ಸಿದ್ಧವಾಗಿದ್ದೇವೆ. 24 ಸಾವಿರ ಬೆಡ್ಗಳನ್ನು ಸಿದ್ಧ ಮಾಡಿದ್ದೇವೆ. 6 ಸಾವಿರ ಆಕ್ಸಿಜನ್ ಬೆಡ್ಗಳು ಸಿದ್ಧ ಇವೆ. ವಾರ್ ಫೂಟ್ನಲ್ಲಿ ಕೆಲಸ ಮಾಡಿದ್ದೇವೆ ಎಂದು ಸಿಎಂ ಹೇಳಿದರು.