ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ರಾಜೀನಾಮೆಯಿಂದ ತೆರವಾಗಿರುವ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಹೈಕಮಾಂಡ್ ಹೆಸರು ಪ್ರಕಟಿಸುತ್ತಿದ್ದಂತೆ ಬಾಬುರಾವ್ ಚಿಂಚನಸೂರ್ ಬೆಂಗಳೂರಿಗೆ ದೌಡಾಯಿಸಿದ್ದಾರೆ. ಮೊದಲು ಬಿಎಸ್ವೈ ಅಧಿಕೃತ ನಿವಾಸ ಕಾವೇರಿಗೆ ಕುಟುಂಬಸಮೇತ ಆಗಮಿಸಿದ ಚಿಂಚನಸೂರ್ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾದರು.
ಬಿಜೆಪಿಗೆ ಕರೆತಂದು ಟಿಕೆಟ್ ಕೊಟ್ಟು ಸೋತರೂ ನಿಗಮ ಮಂಡಳಿಯಲ್ಲಿ ಅವಕಾಶ ನೀಡಿ ಈಗ ಪರಿಷತ್ ಟಿಕೆಟ್ ಸಿಗಲು ಕಾರಣರಾಗಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ನಂತರ ಕುಟುಂಬಸಮೇತ ಆರ್.ಟಿ.ನಗರದಲ್ಲಿರುವ ಸಿಎಂ ಖಾಸಗಿ ನಿವಾಸಕ್ಕೆ ಭೇಟಿ ನೀಡಿ ಸಿಎಂಗೆ ಅಭಿನಂದನೆ ಸಲ್ಲಿಸಿದರು. ಕೆಲಕಾಲ ಸಿಎಂ ಜೊತೆ ಮಾತುಕತೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಾಬುರಾವ್ ಚಿಂಚನಸೂರ್, "ಹೈದರಾಬಾದ್ ಕರ್ನಾಟಕ ಭಾಗದಲ್ಲಿ ನಾನು 5 ಬಾರಿ ಗೆಲುವು ಸಾಧಿಸಿದ್ದೆ. ಆ ಭಾಗದಲ್ಲಿ ನಮ್ಮ ಕೋಲಿ ಸಮಾಜ ಶೇ 45 ರಷ್ಟಿದೆ. ಈಗ ನನ್ನನ್ನು ಗುರುತಿಸಿ ಪಕ್ಷ ಪರಿಷತ್ ಚುನಾವಣೆಗೆ ಟಿಕೆಟ್ ನೀಡಿದೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಿಜೆಪಿಯನ್ನು ಯಾರೂ ಅಲ್ಲಾಡಿಸಲು ಆಗುವುದಿಲ್ಲ. ಆ ಭಾಗದಲ್ಲಿ ಬಿಜೆಪಿ ತುಂಬ ಸ್ಟ್ರಾಂಗ್ ಆಗಿದೆ" ಎಂದರು.
ಮುಂದಿನ ಬಾರಿ ಗುರುಮಿಟ್ಕಲ್ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದು ಪ್ರಕಟಿಸಿದ ಚಿಂಚನಸೂರ್, ಪ್ರಿಯಾಂಕ ಖರ್ಗೆ ಎದುರು ನಿಲ್ಲುತ್ತೀರಾ ಎಂಬ ಪ್ರಶ್ನೆಗೆ, ಅವರ ಕಥೆಯೆಲ್ಲಾ ಇನ್ನು ಮುಗಿಯಿತು ಎಂದು ಹೇಳಿದರು.
ಇದನ್ನೂ ಓದಿ: ಅನಿಶ್ಚಿತತೆಯ ಮಧ್ಯೆ ತಂದೆಗಿಂತಲೂ ಹೆಚ್ಚಿನ ಅವಧಿ ಸಿಎಂ ಪಟ್ಟ ಪೂರೈಸಿದ ಬೊಮ್ಮಾಯಿ