ಬೆಂಗಳೂರು: ರಾಜ್ಯ ಬಿಜೆಪಿ ವತಿಯಿಂದ ನಂದಿಬೆಟ್ಟದಲ್ಲಿ ಜನವರಿ 7, 8 ಮತ್ತು 9 ರಂದು ನಡೆಯಬೇಕಾಗಿದ್ದ ಚಿಂತನ ವರ್ಗದ ಸಭೆಯನ್ನು ಕೋವಿಡ್ ಮೂರನೇ ಅಲೆ ತೀವ್ರಗೊಳ್ಳುತ್ತಿರುವ ಕಾರಣ ಮುಂದೂಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧಿಕೃತವಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಹರಡುವಿಕೆ ನಿಯಂತ್ರಿಸಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಸರ್ಕಾರದ ಸುತ್ತೋಲೆಯನ್ನು ಗೌರವಿಸುವುದು ಮತ್ತು ಸರ್ಕಾರದ ಕಾನೂನು ಪಾಲನೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಚಿಂತನ ಸಭೆಯನ್ನು ಮುಂದೂಡಲಾಗಿದೆ ಎಂದು ಕಟೀಲ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ: ಇಂದಿನಿಂದ ಬೆಂಗಳೂರಲ್ಲಿ 1ರಿಂದ 9, ಪದವಿ ತರಗತಿ ಸ್ಥಗಿತ.. ನಿಯಮ ಮೀರಿದರೆ ಕಠಿಣ ಕ್ರಮ
ಕೋವಿಡ್ ಕಠಿಣ ನಿರ್ಬಂಧದ ಭಾಗವಾಗಿ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ ಹಿನ್ನೆಲೆಯಲ್ಲಿ ಜನವರಿ 7 ರ ಶನಿವಾರದಿಂದ ಸಭೆ ಆರಂಭಿಸುವ ಬದಲು ಜನವರಿ 9 ರ ಸೋಮವಾರದಂದು ಸಭೆ ಆರಂಭಿಸಲು ಚಿಂತನೆ ನಡೆಸಲಾಗಿತ್ತು. ಆದರೆ ಮುಂದಿನ ಎರಡು ವಾರ ಸಭೆ, ಸಮಾರಂಭಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಅಲ್ಲದೆ ಪೂರ್ವಾನುಮತಿ ಪಡೆದ ಸಭೆಗೆ 50 ಜನರ ಮಿತಿ ವಿಧಿಸಲಾಗಿದೆ. ಹಾಗಾಗಿ ಸಭೆ ನಡೆಸಿ ಅನಗತ್ಯವಾಗಿ ಗೊಂದಲವಾಗುವುದು ಬೇಡ, ಆಡಳಿತ ಪಕ್ಷವೇ ನಿಯಮ ಉಲ್ಲಂಘನೆ ಮಾಡುತ್ತಿದೆ ಎನ್ನುವ ಅಪವಾದ ಬರುವುದು ಬೇಡ ಎನ್ನುವ ಕಾರಣಕ್ಕೆ ಇದೀಗ ನಿಯಮ ಸಡಿಲಿಕೆ ಆಗುವವರೆಗೂ ಚಿಂತನ ವರ್ಗ ಸಭೆಯನ್ನು ಮುಂದೂಡಿಕೆ ಮಾಡಿದೆ.