ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕಾಗಿ ಹುಟ್ಟಿಕೊಂಡಿರುವ ಆಕಾಂಕ್ಷಿಗಳು ಹಾಗೂ ನಕಲಿ ಗಾಂಧಿ ಕುಟುಂಬದ ಆಶೀರ್ವಾದ ಕೊರತೆಯಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನಾನು ಬಿಜೆಪಿ ಜೊತೆ ಸಹಕರಿಸದೇ ಇರುವುದಕ್ಕಾಗಿ ನನ್ನನ್ನು ತಿಹಾರ್ ಜೈಲಿಗೆ ಕಳುಹಿಸಲಾಯ್ತು ಎನ್ನುವ ಹೇಳಿಕೆ ನೀಡಿರಬಹುದು ಎಂದು ಬಿಜೆಪಿ ತಿರುಗೇಟು ನೀಡಿದೆ.
ಡಿಕೆ ಶಿವಕುಮಾರ್ ಹೇಳಿಕೆ ಬೆನ್ನಲ್ಲೇ ಟ್ವೀಟ್ ಮಾಡಿರುವ ಬಿಜೆಪಿ, ನಾನು ಬಿಜೆಪಿ ಜೊತೆ ಸಹಕರಿಸದೇ ಇರುವುದಕ್ಕಾಗಿ ನನ್ನನ್ನು ತಿಹಾರ್ ಜೈಲಿಗೆ ಕಳುಹಿಸಲಾಯ್ತು ಎಂದು ಶಿವಕುಮಾರ್ ಸಮರ್ಥನೆ ಕೊಟ್ಟುಕೊಂಡಿದ್ದಾರೆ. ಆದರೆ, ಸತ್ಯ ಅದಲ್ಲ, ತೆರಿಗೆ ವಂಚನೆ ಹಾಗೂ ಅಕ್ರಮ ಸಂಪತ್ತಿನ ಮೂಲದ ತನಿಖೆಗೆ ಸಹಕರಿಸಿಲ್ಲ ಎಂಬ ಕಾರಣಕ್ಕೆ ಇಡಿ ಅಧಿಕಾರಿಗಳು ನಿಮ್ಮನ್ನು ತಿಹಾರಕ್ಕೆ ಕಳುಹಿಸಿದ್ದು.
ತಿಹಾರ್ ಯಾತ್ರೆ ನಡೆಸಿ ವರ್ಷಗಳೇ ಕಳೆದ ಮೇಲೆ ಡಿಕೆ ಶಿವಕುಮಾರ್ ನೀಡಿರುವ ಈ ಹೇಳಿಕೆ ನಂಬಲು ಸಾಧ್ಯವೇ? ಬಹುಶಃ ಸಿದ್ದರಾಮಯ್ಯ ಬಣ ನೀಡುತ್ತಿರುವ ಹಿಂಸೆ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಹುಟ್ಟಿಕೊಂಡಿರುವ ಆಕಾಂಕ್ಷಿಗಳು ಹಾಗೂ ನಕಲಿ ಗಾಂಧಿ ಕುಟುಂಬದ ಆಶೀರ್ವಾದದ ಕೊರತೆಯಿಂದ ಡಿಕೆಶಿ ಅವರು ಈ ಮಾತು ಆಡಿರಬಹುದು ಎಂದು ಟಾಂಗ್ ನೀಡಿದೆ.
(Read More: ಬಿಜೆಪಿ ಸೇರದಿರೋದಕ್ಕೆ ನನ್ನನ್ನು ತಿಹಾರ ಜೈಲಿಗೆ ಹಾಕಿದ್ರು : ಡಿಕೆಶಿ ಹೊಸ ಬಾಂಬ್)
ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಲು ಗಾಂಧೀಜಿ ಕರೆ ನೀಡಿದ್ದರು. ಇದೀಗ ದೇಶದ ಜನತೆ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಲು ಸಿದ್ಧರಾಗಿದ್ದಾರೆ ಎಂದು ಬಿಜೆಪಿ ಟ್ವೀಟ್ ಮೂಲಕ ಕಾಂಗ್ರೆಸ್ ಪಕ್ಷದ ಕಾಲೆಳೆದಿದೆ.
ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ತೃಣಮೂಲ ಕಾಂಗ್ರೆಸ್ ಪಕ್ಷಕ್ಕೂ ಕಾಂಗ್ರೆಸ್ ಮೇಲೆ ವಿಶ್ವಾಸ ಇಲ್ಲ. ಕಾಂಗ್ರೆಸ್ ಮಿತ್ರ ಪಕ್ಷದವರಿಗೆ ಕೂಡ ಕಾಂಗ್ರೆಸ್ ಮೇಲೆ ಭರವಸೆ ಇಲ್ಲ. ಯುಪಿಎ ಅಂಗಪಕ್ಷಗಳೇ ರಾಹುಲ್ ಗಾಂಧಿ ಅವರ ನಾಯಕತ್ವ ಒಪ್ಪುತ್ತಿಲ್ಲ. ಇನ್ನು ದೇಶದ ಜನ ಹೇಗೆ ಒಪ್ಪುತ್ತಾರೆ? ಕಾಂಗ್ರೆಸ್ ಪಕ್ಷದವರು ಭ್ರಮೆಯಲ್ಲಿದ್ದಾರೆ. ಅಧಿಕಾರ ವಂಚಿತರಾಗಿ ಹತಾಶರಾಗಿದ್ದಾರೆ ಎಂದು ವ್ಯಂಗ್ಯವಾಡಿದೆ.
ನಕಲಿ ಗಾಂಧಿ ಕುಟುಂಬದ ಪಳೆಯುಳಿಕೆಯೇ?
ಪರಿಷತ್ ಚುನಾವಣಾ ಅಖಾಡದಲ್ಲಿ ಸಿದ್ದರಾಮಯ್ಯ ಎಲ್ಲಿಯೂ ಸದ್ದು ಮಾಡುತ್ತಿಲ್ಲ. ಟಿಕೆಟ್ ಹಂಚಿಕೆಯ ಕಾರಣದಿಂದ ಡಿಕೆ ಶಿವಕುಮಾರ್ ಜೊತೆಗೆ ಸಿದ್ದರಾಮಯ್ಯ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಇದು ಕಾಂಗ್ರೆಸ್ ಪರಿಷತ್ ಅಭ್ಯರ್ಥಿಗಳ ಮೇಲೂ ಪರಿಣಾಮ ಬೀರಲಿದ್ದು, ಚುನಾವಣಾ ಸೋಲುಗಳನ್ನು ಡಿಕೆಶಿ ತಲೆಗೆ ಕಟ್ಟಲು ವ್ಯವಸ್ಥಿತ ಸಂಚು ರೂಪುಗೊಂಡಿದೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ.
ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ಆಯ್ಕೆ ವಿಚಾರ ಬಂದಾಗ ಸಿದ್ದರಾಮಯ್ಯ ಇದ್ದಕ್ಕಿದ್ದಂತೆ ಮೌನಕ್ಕೆ ಶರಣಾದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಯ್ಕೆ ಮಾಡಿಕೊಂಡ ದುಡ್ಡಿನ ಅಭ್ಯರ್ಥಿಗಳಿಗೆ ಕಾಂಗ್ರೆಸ್ ವರಿಷ್ಠರೂ ಮಣೆ ಹಾಕಿದರು. ತನ್ನವರಲ್ಲದ ಅಭ್ಯರ್ಥಿಗಳ ಪರಶ್ರಮ ವಿನಿಯೋಗಿಸುವುದಕ್ಕೆ ಸಿದ್ದರಾಮಯ್ಯ ಸಿದ್ಧರಿಲ್ಲವೇ? ನೀವು ನಕಲಿ ಗಾಂಧಿ ಕುಟುಂಬದ ಪಳೆಯುಳಿಕೆಯೇ? ಎಂದು ಸಿದ್ದರಾಮಯ್ಯರನ್ನ ಬಿಜೆಪಿ ಕುಟುಕಿದೆ.