ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಬಿಜೆಪಿ ಹಳೆ ಮೈಸೂರು ಪ್ರಾಂತ್ಯದಲ್ಲಿ ಕಮಲ ಅರಳಿಸುವ ಚಿಂತನೆಗೆ ಮುಂದಾಗಿದ್ದು, ಆ ಭಾಗದ ಜನಪ್ರತಿನಿಧಿಗಳ ಜೊತೆ ಮಹತ್ವದ ಸಭೆ ನಡೆಸಲಾಗಿದೆ. ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲವರ್ಧನೆ ವಿಚಾರ ಸಂಬಂಧ ಆ ಭಾಗದ ಸಚಿವರು, ಶಾಸಕರು ಮತ್ತು ಪ್ರಮುಖರ ಜೊತೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಭೆ ನಡೆಸಿದರು.
ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಸಚಿವರಾದ ಗೋಪಾಲಯ್ಯ, ಎಸ್ ಟಿ ಸೋಮಶೇಖರ್, ಆರ್ ಅಶೋಕ್, ಸಂಸದರಾದ ಡಿವಿಎಸ್, ಪ್ರತಾಪ್ ಸಿಂಹ, ಪಿಸಿ ಮೋಹನ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಶಾಸಕರಾದ ಪ್ರೀತಂ ಗೌಡ, ಶಾಸಕರಾದ ಸಿಪಿ ಯೋಗೀಶ್ವರ್, ವೈ ಎ ನಾರಾಯಣ ಸ್ವಾಮಿ ಮತ್ತಿತರರು ಭಾಗಿಯಾಗಿದ್ದರು.
ಸಭೆಯಲ್ಲಿ ಎಲ್ಲ ನಾಯಕರ ಅಭಿಪ್ರಾಯ ಆಲಿಸಿದ ಕಟೀಲ್, ಪಕ್ಷ ಬಲವರ್ಧನೆ ಕುರಿತು ಏನೆಲ್ಲ ಕ್ರಮ ಕೈಗೊಳ್ಳಬೇಕು ಎನ್ನುವ ಕುರಿತು ಚರ್ಚಿಸಿದರು. ಸದ್ಯ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಖಾತೆ ತೆರೆದಿದ್ದು, ಅದನ್ನು ಎರಡಂಕಿಗೆ ತಲುಪಿಸುವ ಕುರಿತು ಸಮಾಲೋಚನೆ ನಡೆಸಲಾಯಿತು. ಜಿಲ್ಲಾ ಕೇಂದ್ರದಲ್ಲಿ ಅದ್ಧೂರಿಯಾಗಿ ಜಿಲ್ಲಾ ಮಟ್ಟದ ಸರ್ಕಾರದ ಸಾಧನಾ ಸಮಾವೇಶಗಳನ್ನು ನಡೆಸಲು ನಿರ್ಧರಿಸಲಾಯಿತು.
ಸಭೆ ನಂತರ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಚುನಾವಣಾ ಪೂರ್ವ ತಯಾರಿ ಬಗ್ಗೆ ಬಹಳಷ್ಟು ಚರ್ಚೆ ಆಗಿದೆ. ಎಲ್ಲ ವ್ಯವಸ್ಥಿತ ರೀತಿ ಚರ್ಚೆ ಮಾಡಿದ್ದೇವೆ ಎಂದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಾತನಾಡಿ, ಸಂಘಟನೆ ಬಲಗೊಳಿಸುವ ದೃಷ್ಟಿಯಿಂದ. ಚುನಾವಣೆ ಇನ್ನು 7 ತಿಂಗಳಿದೆ. ಚುನಾವಣೆ ದೃಷ್ಟಿಯಿಂದ ಸಭೆ ನಡೆಯುತ್ತಿದೆ. ಹಳೆ ಮೈಸೂರು ಭಾಗದಲ್ಲಿ ಸಂಘಟನೆ ಬಗ್ಗೆ ಸಮಾಲೋಚನೆ ಸಭೆ ಆಗಿದೆ ಎಂದು ತಿಳಿಸಿದರು.
ಸಿಪಿ ಯೋಗೇಶ್ವರ್ ಮಾತನಾಡಿ, ಪಕ್ಷದ ಚಟುವಟಿಕೆಯಿಂದ ನಾನು ದೂರ ಉಳಿದಿಲ್ಲ. ನಾನು ಬಿಜೆಪಿ ಕಚೇರಿಗೆ ಬರ್ತಾ ಇರುತ್ತೇನೆ, ಹಳೆ ಮೈಸೂರು ಭಾಗದ ಪ್ರವಾಸದ ಬಗ್ಗೆ ಇನ್ನೂ ಒಂದು ವಾರದಲ್ಲಿ ಹೇಳುತ್ತೇನೆ ಎಂದಷ್ಟೇ ಹೇಳಿ ಹೊರಟರು.
(ಇದನ್ನೂ ಓದಿ: ನಿರಾಣಿ ಮುಂದಿನ ಮುಖ್ಯಮಂತ್ರಿಯಂತೆ, ಪೋಸ್ಟರ್ ವೈರಲ್)