ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಗೊಂದಲಗಳು ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಒಂದು ಕಡೆ ನಾಯಕತ್ವ ಬದಲಾವಣೆ ಪ್ರಹಸನ, ಮತ್ತೊಂದು ಕಡೆ ಸಂಪುಟ ಸೇರುವ ಸರ್ಕಸ್ ಹೈಕಮಾಂಡ್ ಪಡಸಾಲೆ ತಲುಪಿದೆ. ಪ್ಲಾನ್ ಎ, ಪ್ಲಾನ್ ಬಿ ಎಂದುಕೊಂಡು ದೆಹಲಿಯಲ್ಲಿ ಕಸರತ್ತು ನಡೆಸುತ್ತಿದ್ದಾರೆ.
ನಾಯಕತ್ವ ಬದಲಾವಣೆ ವದಂತಿಗೆ ತೆರೆ ಎಳೆಯಲು ಖುದ್ದಾಗಿ ಹೈಕಮಾಂಡ್ ಪ್ರತಿನಿಧಿಯಾಗಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಬಂದು ಶಾಸಕರು, ಸಚಿವರು, ಸಂಸದರ ಜೊತೆ ಸಭೆ ನಡೆಸಿ ಯಡಿಯೂರಪ್ಪ ನಾಯಕತ್ವದ ಪರ ತೀರ್ಪು ಪ್ರಕಟಿಸಿದ್ದರು. ಅವರು ದೆಹಲಿಗೆ ಮರಳುತ್ತಿದ್ದಂತೆ ಮತ್ತೆ ಬಿಎಸ್ವೈ ವಿರೋಧಿ ಬಣ ಚಟುವಟಿಕೆ ಆರಂಭಿಸಿದೆ. ಸಿಎಂ ರೇಸ್ನಲ್ಲಿರುವ ಶಾಸಕ ಅರವಿಂದ ಬೆಲ್ಲದ್ ಮತ್ತೆ ದೆಹಲಿಗೆ ತೆರಳಿ ಬೀಡು ಬಿಟ್ಟಿದ್ದಾರೆ. ಮಾಧ್ಯಮಗಳಿಂದ ದೂರ ಉಳಿದುಕೊಂಡೇ ಹೈಕಮಾಂಡ್ ನಾಯಕರ ಭೇಟಿ ಮಾಡುವ ಪ್ರಯತ್ನ ನಡೆಸಿದ್ದಾರೆ. ದೂರವಾಣಿ ಕದ್ದಾಲಿಕೆ ಆರೋಪ ಮಾಡಿ, ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿದ್ದ ಬೆಲ್ಲದ್ರನ್ನು ಬೆಂಗಳೂರಿನಲ್ಲಿ ಅರುಣ್ ಸಿಂಗ್ ಭೇಟಿ ಮಾಡಿರಲಿಲ್ಲ. ಹಾಗಾಗಿ, ದೆಹಲಿಗೆ ಬಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಯಡಿಯೂರಪ್ಪ ಸರ್ಕಾರದ ವಿರುದ್ಧ ದೂರಗಳ ಸರಮಾಲೆಯನ್ನೇ ಸಿದ್ದಪಡಿಸಿಕೊಂಡಿದ್ದು ಎಲ್ಲವನ್ನೂ ಹೈಕಮಾಂಡ್‌ಗೆ ನೀಡಿ ನಾಯಕತ್ವ ಬದಲಾವಣೆ ಕೂಗನ್ನು ಸಮರ್ಥಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಇನ್ನು, ಸಿಡಿ ಕೇಸ್ನಲ್ಲಿ ಸಚಿವ ಸ್ಥಾನ ಕಳೆದುಕೊಂಡು ರಾಜಕೀಯವಾಗಿ ಅತಂತ್ರವಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೂಡ ಮರಳಿ ಸಂಪುಟ ಸೇರಲು ಸರ್ಕಸ್ ಆರಂಭಿಸಿದ್ದಾರೆ. ಈ ಬಗ್ಗೆ ನೇರವಾಗಿ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಲು ನಿರ್ಧಾರ ಮಾಡಿದ್ದ ಜಾರಕಿಹೊಳಿ ಕಡೆ ಕ್ಷಣದಲ್ಲಿ ತಮ್ಮ ರಾಜಕೀಯ ಗುರು ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಸಲಹೆ ಮೇರೆಗೆ ಯಡಿಯೂರಪ್ಪ ಜೊತೆಗಿನ ಮಾತುಕತೆ ಬಿಟ್ಟು, ನೇರವಾಗಿ ಹೈಕಮಾಂಡ್ ಮುಂದೆ ಬೇಡಿಕೆ ಇಡಲು ಮುಂದಾಗುದ್ದಾರೆ. ಹಾಗಾಗಿ, ದೆಹಲಿಗೆ ತೆರಳಿದ್ದು ವರಿಷ್ಠರ ಭೇಟಿಗೆ ಕಾಯುತ್ತಿದ್ದಾರೆ.
ಫಡ್ನವಿಸ್ ಸಲಹೆ:
ಗಂಭೀರ ಆರೋಪ ಇರುವಾಗ ಮತ್ತೆ ಸಚಿವ ಸ್ಥಾನ ನೀಡುವ ಸಾಧ್ಯತೆ ತೀರಾ ಕಡಿಮೆ. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಚಿವ ಸ್ಥಾನಕ್ಕೆ ಬೇಡಿಕೆ ಇರಿಸಿದರೆ ಪ್ರಕರಣ ಮುಗಿಯುತ್ತಿದ್ದಂತೆ ಕೊಡುವ ಭರವಸೆ ನೀಡುತ್ತಾರೆ. ಅಲ್ಲದೆ, ಈಗಲೇ ಸಚಿವ ಸ್ಥಾನ ನೀಡಲು ಯಡಿಯೂರಪ್ಪ ಮುಂದಾದರೂ ಅದಕ್ಕೆ ಹೈಕಮಾಂಡ್ ಸಮ್ಮತಿ ನೀಡಲ್ಲ. ಹಾಗಾಗಿ, ನೇರವಾಗಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಅವರಿಂದಲೇ ಪರಿಹಾರ ಕಂಡುಕೊಳ್ಳುವುದು ಸೂಕ್ತ ಎಂದು ಫಡ್ನವಿಸ್ ಸಲಹೆ ನೀಡಿದ್ದಾರೆ. ಅದರಂತೆ ಈ ಹಂತದಲ್ಲಿ ನನಗೆ ಸಚಿವ ಸ್ಥಾನ ನೀಡದೆ ಇದ್ದರೂ ಬಾಲಚಂದ್ರ ಜಾರಕಿಹೊಳಿಗೆ ಅವಕಾಶ ಕಲ್ಪಿಸಿ ಎಂದು ಬೇಡಿಕೆಯಿಟ್ಟು ಜಾರಕಿಹೊಳಿ ಕುಟುಂಬಕ್ಕೆ ಸಚಿವ ಸ್ಥಾನ ಸಿಗುವಂತೆ ಮಾಡಬಹುದು. ನಂತರ ಜಲಸಂಪನ್ಮೂಲ ಖಾತೆಯನ್ನೇ ಪಡೆದು ರಾಜಕೀಯ ಹಿನ್ನಡೆಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುವ ಲೆಕ್ಕಾಚಾರದೊಂದಿಗೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಜಾರಕಿಹೊಳಿ ದೆಹಲಿಗೆ ತೆರಳಿದ್ದಾರೆ.
ಜಾರಕಿಹೊಳಿ, ಫಡ್ನವಿಸ್ ಭೇಟಿ:
ಹೈಕಮಾಂಡ್ ನಾಯಕರ ಭೇಟಿಗೂ ಮೊದಲು ದೇವೇಂದ್ರ ಫಡ್ನವಿಸ್ ಭೇಟಿಗೆ ರಮೇಶ್ ಜಾರಕಿಹೊಳಿ ನಿರ್ಧರಿಸಿದ್ದಾರೆ. ಹಾಗಾಗಿ, ಮುಂಬೈ ಮೂಲಕ ದೆಹಲಿಗೆ ತೆರಳಲು ಜಾರಕಿಹೊಳಿ ನಿರ್ಧರಿಸಿದ್ದರು. ಆದರೆ ಫಡ್ನವಿಸ್ ಕೂಡ ದೆಹಲಿಗೆ ತೆರಳಿರುವ ಹಿನ್ನಲೆಯಲ್ಲಿ ನೇರವಾಗಿ ದೆಹಲಿಗೆ ತೆರಳಿದ್ದು, ಇಂದು ಫಡ್ನವಿಸ್ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಅವರು ನೀಡುವ ಸಲಹೆ ಮೇರೆಗೆ ಹೈಕಮಾಂಡ್ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪಗೆ ಒಂದು ಕಡೆ ನಾಯಕತ್ವ ಬದಲಾವಣೆ ಕೂಗಿಗೆ ಪದೇ ಪದೇ ಶಕ್ತಿಪ್ರದರ್ಶನದ ಮೂಲಕ ಉತ್ತರ ಕೊಡುವ ಸವಾಲು ಒಂದು ಕಡೆಯಾದರೆ, ತಮ್ಮ ಕುಟುಂಬಕ್ಕೆ ಸಂಪುಟದಲ್ಲಿ ಸ್ಥಾನ ನೀಡುವಂತೆ ಜಾರಕಿಹೊಳಿ ಹೈಕಮಾಂಡ್ ಮೂಲಕ ಒತ್ತಡ ಹೇರಿಸಿ ಸಂಪುಟ ವಿಸ್ತರಣೆ ಎನ್ನುವ ಜೇನಗೂಡಿಗೆ ಹೈಹಾಕಿ ಇಲ್ಲದ ಸಮಸ್ಯೆ ಎದುರಾಗುವಂತೆ ಮಾಡಲು ಹೊರಟಿರುವುದು ಮತ್ತೊಂದು ಕಡೆಯಾಗಿದೆ.
ಈ ಎಲ್ಲಾ ಸಮಸ್ಯೆಗಳ ನಡುವೆಯೂ ಇದಕ್ಕೆಲ್ಲಾ ಕೇರ್ ಮಾಡದ ಸಿಎಂ ಯಡಿಯೂರಪ್ಪ, ಎಂದಿನಂತೆ ತಮ್ಮ ಕೆಲಸ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಬಿಡುವಿಲ್ಲದ ವೇಳಾಪಟ್ಟಿ ನಿಗದಿಪಡಿಸಿಕೊಂಡು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾ ಆಡಳಿತ ನಿರ್ವಹಣೆ ಮಾಡುತ್ತಿದ್ದಾರೆ. ಸದ್ಯದ ಮಟ್ಟಿಗೆ ನಾಯಕರ ದೆಹಲಿಯಾನಕ್ಕೆ ಹೈಕಮಾಂಡ್ ಯಾವ ರೀತಿ ಸ್ಪಂದಿಸಲಿದೆ, ಯಡಿಯೂರಪ್ಪಗೆ ಏನು ಸಂದೇಶ ರವಾನಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಯಮನ ಪಾದ ಸೇರಿಸುವಂತಿದೆ ಯಮುನೆಯ ನೀರು: ಮೀನುಗಾರಿಕೆ ನಿಷೇಧಿಸಿದ ದೆಹಲಿ ಸರ್ಕಾರ