ಬೆಂಗಳೂರು : ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯ ಮುಚ್ಚುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಬೆಂಗಳೂರು ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮೂಲಕ ಅಂದಿನ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ. ಪರಮೇಶ್ವರ್ ಅವರು ಈ ಮಹಿಳಾ ವಿಶ್ವವಿದ್ಯಾಲಯವನ್ನು ಮಾಡಿದ್ದರು. ಆದರೆ, ಅಂತಹ ವಿಶ್ವವಿದ್ಯಾಲಯವನ್ನು ಸಾಮಾನ್ಯ ವಿವಿ ಮಾಡುವ ಯತ್ನಕ್ಕೆ ಸರ್ಕಾರ ಮುಂದಾಗಿದೆ ಎಂದು ಹೇಳಿದ್ದಾರೆ.
ಜೊತೆಗೆ ಆರ್ಥಿಕ ಹಿಂಜರಿತ, ಉದ್ಯೋಗ ಅವಕಾಶ ಇಲ್ಲದಿರುವುದು, ನೋಟು ಅಮಾನ್ಯದಂತಹ ಕ್ರಮಗಳು ಜನರನ್ನು ಸಂಕಷ್ಟಕ್ಕೆ ದೂಡಿದ್ದು ಒಂದಡೆಯಾದರೆ, ಕೋವಿಡ್ ಮತ್ತು ದಿಢೀರ್ ಲಾಕ್‌ಡೌನ್‌ನಿಂದಾಗಿ ಜನಸಾಮಾನ್ಯರ ಬದುಕು ದುಸ್ಥಿತಿಗೆ ಇಳಿದಿದೆ. ಇದರಿಂದಾಗಿ ತಿನ್ನುವ ಅನ್ನ, ಮಕ್ಕಳ ಶಾಲಾ ಶಿಕ್ಷಣ ಸೇರಿದಂತೆ ಆರೋಗ್ಯ ಸೇವೆಗಳು ತೀವ್ರ ದುಬಾರಿಯಾಗಿವೆ ಎಂದಿದ್ದಾರೆ.
ನೆಹರು ಅವರ ಕೊಡುಗೆ ಅಪಾರ : ಸಾರ್ವಜನಿಕ ವಲಯದ ಉದ್ದಿಮೆಗಳನ್ನು ರಾಷ್ಟ್ರಾದ್ಯಂತ ಸ್ಥಾಪಿಸುವ ಮೂಲಕ ಸ್ವಾವಲಂಬಿ ಕೈಗಾರಿಕೆಗಳನ್ನು ಬೆಳೆಸಲಾಗಿದೆ. ವಿವಿಧ ಸಂಸ್ಥೆಗಳನ್ನು ನೆಹರುವರು ಸ್ಥಾಪಿಸಿದ್ದಾರೆ. ಯೋಜನಾ ಆಯೋಗ, ಪಂಚವಾರ್ಷಿಕ ಯೋಜನೆಗಳು, ಪಂಚಶೀಲ ತತ್ವಗಳು, ಇಂದಿನ ಸಂದರ್ಭದಲ್ಲಿ ಅಗತ್ಯವಾಗಿರುವ ಅಲಿಪ್ತ ನೀತಿ ಮತ್ತು ಸಂಸದೀಯ ಪ್ರಜಾಪ್ರಭುತ್ವ ಬಲಗೊಳಿಸಿದ ಕೀರ್ತಿ ನೆಹರುರವರಿಗೆ ಸಲ್ಲುತ್ತದೆ.
ಲಾಲ್ ಬಹಾದ್ದೂರಶಾಸ್ತ್ರಿ - ಹಸಿರು ಕ್ರಾಂತಿಯ ಹರಿಕಾರ, ನಮ್ಮ ದೇಶದ ಮಿಲಿಟರಿ ವ್ಯವಸ್ಥೆಯನ್ನು ಬಲಗೊಳಿಸಿ,ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ ಭಾರತ ಮಾಡಿದ್ದಾರೆ. ರಾಜ್ಯದ ಪ್ರಮುಖ ಆಲಮಟ್ಟಿ ಆಣೆಕಟ್ಟು ಕಟ್ಟಲು ಶಾಸ್ತ್ರಿರವರು ಅಡಿಗಲ್ಲು ಹಾಕಿದರು ಎಂದು ವಿವರಿಸಿದರು.
ನಮ್ಮದು ಬದುಕಿನತ್ತ ಹೋರಾಟ, ಅವರದು ಭಾವನೆಗಳ ಜೊತೆ ಚೆಲ್ಲಾಟ : ಇಂದಿರಾಗಾಂಧಿ, ಪಿ.ವಿ. ನರಸಿಂಹರಾವ್, ಡಾ. ಮನಮೋಹನ್ ಸಿಂಗ್ ಅಧಿಕಾರದಲ್ಲಿದ್ದಾಗ ದೇಶಕ್ಕೆ ಬಲ ತುಂಬಿದರು. ನಾವು ಜಾತಿ, ಧರ್ಮ ಮೀರಿ ಕೆಲಸ ಮಾಡಿದ್ದೇವೆ. ಎಲ್ಲರಿಗೂ ಶಕ್ತಿ ತುಂಬಿದ್ದೇವೆ. ಜನರಿಗೆ ಸ್ವಾಭಿಮಾನದಿಂದ ಬದುಕಿ ಬಾಳಲು ಅವಕಾಶ ಮಾಡಿಕೊಡಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಜನರ ಭಾವನೆ ಜತೆ ಚೆಲ್ಲಾಟವಾಡುತ್ತಿರುವ ಬಿಜೆಪಿ ಸರ್ಕಾರ ಕಿತ್ತೊಗೆಯಬೇಕಿದೆ. 140-150 ಸ್ಥಾನ ಗೆದ್ದು ಅಧಿಕಾರಕ್ಕೆ ಬರಬೇಕು. ನಮ್ಮದು ಬದುಕಿನತ್ತ ಹೋರಾಟ, ಅವರದ್ದು ಭಾವನೆಯ ಜತೆ ಚೆಲ್ಲಾಟವಾಗಿದೆ. ಎಲ್ಲರ ಜತೆಗೂಡಿಸಿಕೊಂಡು ನಾವು ಮುನ್ನಡೆಯಬೇಕು ಎಂದು ಹೇಳಿದ್ದಾರೆ.
ಓದಿ : 3 ವರ್ಷದಿಂದ ಕೂಡಿಟ್ಟ 1 ರೂ.ನಾಣ್ಯಗಳನ್ನೇ ನೀಡಿ ₹2.6 ಲಕ್ಷ ಮೌಲ್ಯದ ಬೈಕ್ ಖರೀದಿಸಿದ ಯುವಕ!