ಬೆಂಗಳೂರು: ಭಾರತ್ ಬಂದ್ ಪ್ರತಿಭಟನೆ ರಾಜಕೀಯ ಪ್ರತಿಭಟನೆಯಾಗಿತ್ತು, ರೈತರ ಪ್ರತಿಭಟನೆ ಆಗಿರಲಿಲ್ಲ. ಅದಕ್ಕಾಗಿ ರೈತರಿಗೆ ಧನ್ಯವಾದ ಹೇಳುತ್ತೇನೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಭಾರತ ಬಂದ್ಗೆ ಎಲ್ಲೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಧಾನಿ ಮೋದಿ ಅವರ ಆದಾಯ ದ್ವಿಗುಣಗೊಳಿಸುವ ಕ್ರಮಕ್ಕೆ ರೈತರು ಬೆಂಬಲ ವ್ಯಕ್ತಪಡಿಸಿದ್ದಾರೆ. ನಾವು ರೈತರ ಹಿತಕ್ಕೆ ಬದ್ಧರಾಗಿದ್ದೇವೆ. ಅದೇ ರೀತಿಯ ರೈತಪರ ಕ್ರಮಗಳನ್ನು ಮುಂದುವರಿಸುತ್ತೇವೆ. ದಲ್ಲಾಳಿಗಳ ಮಾತಿಗೆ ಕಿವಿಗೊಡದ ರೈತರಿಗೆ ನಾನು ಧನ್ಯವಾದ ತಿಳಿಸುತ್ತೇನೆ ಎಂದರು.
ಓದಿ: ಪದೇ ಪದೆ ಪ್ರತಿಭಟನೆ, ಬಂದ್ ಮಾಡಬೇಡಿ: ರೈತರಿಗೆ ಸಿಎಂ ಮನವಿ
ರೈತರ ಜೊತೆ ಮಾತುಕತೆಗೆ ನಾವು ಬದ್ಧರಾಗಿದ್ದೇವೆ. ಕೃಷಿ ಸುಧಾರಣೆ ಸಂಬಂಧವಿರುವ ಸಂಶಯಾತ್ಮಕ ಅಂಶಗಳ ಬಗ್ಗೆ ಮಾತುಕತೆ ನಡೆಸಿ, ಅದಕ್ಕೆ ಉತ್ತರಿಸುತ್ತೇವೆ. ತಪ್ಪು ತಿಳುವಳಿಕೆಯಿಂದ ರೈತರು ದೂರ ಬನ್ನಿ ಎಂದು ಅವರು ಹೇಳಿದರು.
ದಲ್ಲಾಳಿಗಳ ಕಪಿಮುಷ್ಟಿಗೆ ರೈತರನ್ನು ಸಿಲುಕಿಸಿ ರಾಜಕಾರಣ ಮಾಡಬೇಕಾ ಅಥವಾ ದಲ್ಲಾಳಿಗಳಿಂದ ಹೊರಗೆ ತಂದು ರೈತರ ಪರವಾಗಿ ನಿಲ್ಲಬೇಕಾ ಎಂಬ ನಿರ್ಧಾರ ನಿಮಗೆ ಬಿಟ್ಟಿದ್ದು ಎಂದು ಸಿ.ಟಿ.ರವಿ ಹೇಳಿದರು.