ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಹಗರಣಗಳ ತನಿಖೆಗೆ ಆದೇಶಿಸಿದೆ. ಇದರ ಬೆನ್ನಲ್ಲೇ ನಾಲ್ಕು ವರ್ಷದ ಅವಧಿಯಲ್ಲಿ ದೋಸ್ತಿ ಪಕ್ಷಗಳು ನಡೆಸಿದ ಅವ್ಯವಹಾರಗಳ ತನಿಖೆಗೆ ಬಿಜೆಪಿ ಮುಂದಾಗಿದೆ.
ಬಿಬಿಎಂಪಿ ಚುನಾವಣೆ ಬಳಿಕ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ನೂತನ ಮೇಯರ್ ಗೌತಮ್ ಕುಮಾರ್ ಜೈನ್ ಮತ್ತು ಉಪ ಮೇಯರ್ ರಾಮ್ ಮೋಹನ್ ರಾಜ್ ಭೇಟಿ ನೀಡಿದರು. ಈ ವೇಳೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ವಾಗತಿಸಿ ಅಭಿನಂದನೆ ಸಲ್ಲಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಪಾಲಿಕೆಯಲ್ಲಿ ಮೇಯರ್, ಉಪ ಮೇಯರ್, ಪಾಲಿಕೆ ಸದಸ್ಯರು ಒಂದು ತಂಡದ ರೀತಿ ಕಾರ್ಯನಿರ್ವಹಿಸಲಿದ್ದಾರೆ. ಜನತೆಯ ಆಶೋತ್ತರಗಳಿಗೆ, ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲಿದ್ದಾರೆ. ಮೈತ್ರಿ ಪಕ್ಷಗಳು ನಡೆಸಿದ ಅವ್ಯವಹಾರಗಳನ್ನು ಬಯಲಿಗೆಳೆದು ಒಳ್ಳೆಯ ಆಡಳಿತ ನೀಡಿಲಿದ್ದೇವೆ ಎಂದು ತನಿಖೆಯ ಸೂಚನೆ ನೀಡಿದರು.
ನಾಲ್ಕು ವರ್ಷಗಳ ಹಿಂದೆ ನಡೆದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಗಳಿಸಿದ್ದರೂ ಕಾಂಗ್ರೆಸ್, ಜೆಡಿಎಸ್ ವಾಮಮಾರ್ಗದಿಂದ ಅಧಿಕಾರಕ್ಕೇರಿದ್ದರು. ನಾಲ್ಕು ವರ್ಷಗಳ ನಂತರ ನಮಗೆ ಆಡಳಿತ ನಡೆಸುವ ಅವಕಾಶ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಬೆಂಗಳೂರಿನ ಸಂಸದರು, ಶಾಸಕರು, ಪರಿಷತ್ ಸದಸ್ಯರು ಹಾಗೂ ಪಾಲಿಕೆ ಸದಸ್ಯರು ಅಭಿಪ್ರಾಯ ಪಡೆದೇ ಮೇಯರ್ ಹಾಗು ಉಪ ಮೇಯರ್ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಯಿತು. ಅಭ್ಯರ್ಥಿ ಆಯ್ಕೆಯಲ್ಲಿ ಯಾವುದೇ ಅಸಮಾಧಾನ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.