ಬೆಂಗಳೂರು: ಗೆದ್ದರೆ 5 ಲಕ್ಷ ರೂ.ಕೊಡುತ್ತೇನೆ ಎಂದು ಬೆಂಗಳೂರು ವಿಧಾನ ಪರಿಷತ್‌ನ ಕಾಂಗ್ರೆಸ್ ಅಭ್ಯರ್ಥಿ ಯೂಸೂಫ್ ಶರೀಫ್ ಬಾಬು (ಕೆ.ಜಿ.ಎಫ್ ಬಾಬು) ಪ್ರಚಾರ ನಡೆಸಿ ಹಣದ ಆಮಿಷವೊಡ್ಡಿದ್ದಾರೆ. ಹೀಗಾಗಿ ಅವರ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ.
ಮಾತ್ರವಲ್ಲದೇ, ಚುನಾವಣಾ ಕಣದಿಂದ ಯೂಸುಫ್ ಬಾಬುರನ್ನು ವಜಾಗೊಳಿಸುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ಬಿಜೆಪಿ ನಾಯಕರು ಮನವಿ ಮಾಡಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತರ ಕಚೇರಿಗೆ ಭೇಟಿ ನೀಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಎಸ್.ಸಿ. ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರನ್ನೊಳಗೊಂಡ ನಿಯೋಗ ದೂರು ನೀಡಿದೆ.
ವಿಧಾನ ಪರಿಷತ್ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಅವರವರ ಪಕ್ಷ ಕೈಗೊಂಡಿದ್ದ ಜನಪರ ಕೆಲಸ, ಸಾಧನೆಗಳನ್ನು ಹೇಳಿ ಮತಯಾಚಿಸುವುದು ಸಹಜ. ಆದರೆ, ಯೂಸೂಫ್ ಶರೀಫ್ ಬಾಬು ತಮ್ಮ ಚುನಾವಣಾ ಪ್ರಚಾರ ಭಾಷಣದುದ್ದಕ್ಕೂ ಮತದಾರರಿಗೆ ಹಲವು ರೀತಿಯ ಆಮಿಷವನ್ನು ತೋರಿಸುತ್ತಾ, ಹಣ ಬಲದ ಮುಖಾಂತರ ದಿನವೂ ಲಕ್ಷ, ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
'500 ಕೋಟಿ ರೂ. ಆಮಿಷದ ಆರೋಪ'
5 ಸಾವಿರ, ನಾಲ್ವತ್ತು ಸಾವಿರ, 50 ಸಾವಿರ ಹಾಗೂ ಒಂದು ಲಕ್ಷ ಜೀವ ವಿಮೆ ಲೆಕ್ಕದಲ್ಲಿ ತಲಾ ರೂ.5.00 ಲಕ್ಷ. ಹೀಗೆ 500 ಕೋಟಿಗೂ ಅಧಿಕ ಹಣವನ್ನು ನನ್ನನ್ನು ಗೆಲ್ಲಿಸಿದರೆ ನಿಮಗೆ ಕೊಡುತ್ತೇನೆ ಎಂದು ಬಹಿರಂಗವಾಗಿ ಹೇಳುತ್ತಾ ನೇರವಾಗಿಯೇ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದು ಪ್ರತ್ಯಕ್ಷವಾಗಿ ಕಾಣುತ್ತಿದೆ. ತಮ್ಮದೇ ಆದ ಚುನಾವಣಾ ಪ್ರಣಾಳಿಕೆಯನ್ನು ಮುದ್ರಿಸಿ ಮತದಾರರಿಗೆ ಹಂಚುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಕಾಂಗ್ರೆಸ್‌ನ ಯೂಸುಫ್ ಬಾಬು ಅವರನ್ನು ಚುನಾವಣಾ ಕಣದಿಂದ ನಿವೃತ್ತಿಗೊಳಿಸಬೇಕು. ಯೂಸುಫ್ ಬಾಬು ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಬಿಜೆಪಿ ವಿರುದ್ಧ ಆರೋಪ ಮಾಡುವುದನ್ನು ಕಾಂಗ್ರೆಸ್ ನಿಲ್ಲಿಸಬೇಕು. ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ಗೆ ಸಂವಿಧಾನದ ಬಗ್ಗೆ ಗೌರವ ಇದ್ದರೆ ಅಭ್ಯರ್ಥಿಯನ್ನು ನಿವೃತ್ತಿಗೊಳಿಸಲಿ, ಯೂಸುಫ್ ಬಾಬು ವಿರುದ್ಧ ಕಾಂಗ್ರೆಸ್ ಪಕ್ಷ ಕ್ರಮಕೈಗೊಂಡು ಪಕ್ಷದಿಂದ ವಜಾಗೊಳಿಸಬೇಕು ಎಂದರು.
'ಕೈಲಾಗದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜೀನಾಮೆ ಕೊಡ್ಲಿ':
ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಗೋಪಾಲಕೃಷ್ಣ ಸ್ಕೆಚ್ ಆರೋಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ರವಿಕುಮಾರ್, ಇಂತಹ ಕೊಲೆಗಡುಕನನ್ನು ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಚುನಾವಣೆಗೆ ಸ್ಫರ್ಧೆ ಮಾಡುವಂತೆ ಮಾಡಿದ್ದರು. ನಿಮ್ಮ ಪಕ್ಷ ಕೊಲೆಗಡುಕರ ಪಕ್ಷ ವಿಶ್ವನಾಥ್ ಏನು ಸಾಚಾನಾ ಎಂದು ಕಾಂಗ್ರೆಸ್ ನವರು ಅಹಂಕಾರದ ಮಾತಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಗೋಪಾಲಕೃಷ್ಣ ವಿರುದ್ಧ ಕ್ರಮ ಕೈಗೊಳ್ಳದೇ ಇಂತಹ ಕೊಲೆಗಡುಕನನ್ನು ಇನ್ನೂ ಪಕ್ಷದಲ್ಲಿ ಇಟ್ಟುಕೊಂಡಿದೆ. ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ ಅಂತಾದರೆ ಕಾಂಗ್ರೆಸ್ ಶೋಚನೀಯ ಸ್ಥಿತಿ ತಲುಪಿದೆ. ಪ್ರಜಾಪ್ರಭುತ್ವದಲ್ಲಿ ಇರಲು ಕಾಂಗ್ರೆಸ್ ಪಕ್ಷ ನಾಲಾಯಕ್. ಕೈಲಾಗದೇ ಇರುವ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜೀನಾಮೆ ಕೊಟ್ಟು ಹೋಗುವುದು ಒಳ್ಳೆಯದು ಎಂದರು.