ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದ ಮುಂದೆ ಯೋಗ ಕಾರ್ಯಕ್ರಮ ನಡೆಸಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ವ್ಯಾಸ ಯೋಗ ವಿವಿ ವಿಸಿ ಡಾ. ಬಿ.ಆರ್. ರಾಮಕೃಷ್ಣ, ಚಲನಚಿತ್ರ ನಟಿ ಅದಿತಿ ಪ್ರಭುದೇವ ಮತ್ತು ಬಿಜೆಪಿ ಕಾರ್ಯಕರ್ತರು ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯೋಗಾಸನ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಚಲನಚಿತ್ರ ನಟಿ ಅದಿತಿ ಪ್ರಭುದೇವ, ಯೋಗ ಒಂದು ಬ್ರಹ್ಮಾಂಡವಿದ್ದಂತೆ, ಯೋಗ ಎನ್ನುವುದು ದೇಹ ಮನಸ್ಸು ಆತ್ಮ ಪರಮಾತ್ಮವನ್ನು ಒಟ್ಟಿಗೆ ಸೇರಿಸುತ್ತದೆ, ನಮ್ಮನ್ನು ನಾವು ಅರಿತುಕೊಳ್ಳಲು ಯೋಗ ಸಹಾಯ ಮಾಡುತ್ತದೆ. ಯೋಗ ಅಭ್ಯಾಸದಿಂದ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ, ಆದರೆ, ಯೋಗಕ್ಕೆ ಒಂದು ಧರ್ಮದ ಹಣೆಪಟ್ಟಿ ಕಟ್ಟಲಾಗಿದೆ ಇದು ಸರಿಯಲ್ಲ, ಪ್ರಧಾನಿ ಮೋದಿ ಹೇಳಿದಂತೆ ಎಲ್ಲರೂ ಯೋಗ ಮಾಡಬೇಕು ಎಂದು ಕರೆ ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಮನಸು ಬುದ್ಧಿ ಆತ್ಮದ ಏಕಾಗ್ರತೆ ಸಾಧಿಸಲು ಯೋಗದಿಂದ ಮಾತ್ರ ಸಾಧ್ಯ, ಯೋಗ ಮಾಡಿದವರು ಹೇಗಿರುತ್ತಾರೆ ಎಂದರೆ ನರೇಂದ್ರ ಮೋದಿಯವರನ್ನು ತೋರಿಸಿದರೆ ಸಾಕು, ನಾವೆಲ್ಲರೂ ಆ ಹಂತಕ್ಕೆ ಹೋಗಬೇಕಾದರೆ ಯೋಗ ಮಾಡಬೇಕು. ಯೋಗ ಸುಂದರವಾದ ಅಧ್ಯಾತ್ಮದ ದಾರಿ ಎಂದರು.
ಐತಿಹಾಸಿಕ ಚಾಮರಾಜೇಶ್ವರ ದೇಗುಲ ಮುಂಭಾಗ ಸಾವಿರಾರು ಮಂದಿ ಯೋಗ ಪ್ರದರ್ಶನ
ಚಾಮರಾಜನಗರ: ಚಾಮರಾಜನಗರದ ಐತಿಹಾಸಿಕ ದೇವಾಲಯ ಚಾಮರಾಜೇಶ್ವರ ದೇವಾಲಯ ಮುಂಭಾಗ ಚಾಮರಾಜನಗರ ಡಿಸಿ ಚಾರುಲತಾ ಸೋಮಲ್, ಎಡಿಸಿ ಕಾತ್ಯಾಯಿನಿ ದೇವಿ, ಜಿಪಂ ಸಿಇಒ ಗಾಯತ್ರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಯೋಗಾಸನ ಮಾಡಿದರು.