ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ದೃಷ್ಟಿಯಲ್ಲಿರಿಸಿಕೊಂಡು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡಿರುವುದಕ್ಕೆ ಪೂರಕವಾಗಿ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅನುಕಂಪದ ಗೆಲುವಿನ ಬದಲು ಭವಿಷ್ಯದ ನಾಯಕತ್ವ ರೂಪಿಸುವುದಕ್ಕೆ ಹೈಕಮಾಂಡ್ ಮುಂದಾಗಿದ್ದರಿಂದ ಹಾನಗಲ್ ಕ್ಷೇತ್ರದ ಟಿಕೆಟ್ ಉದಾಸಿ ಕುಟುಂಬದ ಕೈತಪ್ಪಿದ್ದು, ಸಿಂದಗಿಯಲ್ಲಿ ಅನಾಯಾಸವಾಗಿ ಭೂಸನೂರ್ಗೆ ಟಿಕೆಟ್ ಸಿಕ್ಕಿದೆ.
ಬಿಜೆಪಿಯ ಮಿಷನ್ 2023ಕ್ಕೆ ವೇದಿಕೆ ಸಜ್ಜಾಗುತ್ತಿದೆ. ಚುನಾವಣಾ ಕಾರಣಕ್ಕಾಗಿಯೇ ಯಡಿಯೂರಪ್ಪ ಜಾಗದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ತಂದು ಕೂರಿಸಿದ್ದು, ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆಗೆ ಹೋಗುವುದಾಗಿ ಅಮಿತ್ ಶಾ ಪ್ರಕಟಿಸಿಯೂ ಆಗಿದೆ. ಇದರ ನಡುವೆ ಬಂದಿರುವ ಎರಡು ವಿಧಾನ ಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ವಿಷಯದಲ್ಲಿಯೂ ಮುಂದಿನ ಚುನಾವಣೆ ಗುರಿಯಾಗಿಸಿಕೊಂಡೇ ಟಿಕೆಟ್ ನೀಡಿರುವುದು ಸ್ಪಷ್ಟವಾಗಿದೆ.
ರೇವತಿ ಉದಾಸಿಗೆ ಟಿಕೆಟ್ ನೀಡಲು ಬಿಜೆಪಿ ಉಸ್ತುವಾರಿ, ರಾಜ್ಯಾಧ್ಯಕ್ಷರ ವಿರೋಧ!
ಸಿಎಂ ಉದಾಸಿ ನಿಧನದಿಂದಾಗಿ ನಡೆಯುತ್ತಿರುವ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಉದಾಸಿ ಕುಟುಂಬಕ್ಕೆ ಟಿಕೆಟ್ ನೀಡುವಂತೆ ಸ್ಥಳೀಯ ನಾಯಕರು, ಕಾರ್ಯಕರ್ತರು ಮನವಿ ಮಾಡಿದ್ದರು. ಯಡಿಯೂರಪ್ಪ ಕೂಡ ಉದಾಸಿ ಕುಟುಂಬಕ್ಕೆ ಟಿಕೆಟ್ ನೀಡುವ ಬಗ್ಗೆ ಒಲವು ಹೊಂದಿದ್ದರು. ಉದಾಸಿ ಪತ್ನಿ ಅಥವಾ ಸೊಸೆ ರೇವತಿ ಉದಾಸಿಗೆ ಟಿಕೆಟ್ ನೀಡಬೇಕು ಎನ್ನುವುದು ಚರ್ಚಿತ ವಿಷಯವಾಗಿತ್ತು.
ಅಕ್ಟೋಬರ್ 3 ರಂದು ನಡೆದಿದ್ದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿಯೂ ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗಿತ್ತು. ಯಡಿಯೂರಪ್ಪ ಸೇರಿದಂತೆ ಕೆಲವರು ಉದಾಸಿ ಕುಟುಂಬಕ್ಕೆ ಟಿಕೆಟ್ ನೀಡುವ ಒಲವು ವ್ಯಕ್ತಪಡಿಸಿದ್ದರೆ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಟಿ ರವಿ ಸೇರಿದಂತೆ ಹಲವರು ರೇವತಿ ಉದಾಸಿಗೆ ಟಿಕೆಟ್ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಸಿಎಂ ಉದಾಸಿ ದೀರ್ಘಾವಧಿಗೆ ಹಾನಗಲ್ ಕ್ಷೇತ್ರದಲ್ಲಿ ಪ್ರತಿನಿಧಿಸಿದ್ದಾರೆ. ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರ ಪುತ್ರ ಶಿವಕುಮಾರ ಉದಾಸಿ ಮೂರನೇ ಬಾರಿಗೆ ಹಾವೇರಿ ಸಂಸದರಾಗಿದ್ದಾರೆ. ಈಗ ಅನುಕಂಪ ಎನ್ನುವ ಕಾರಣಕ್ಕೆ ಉದಾಸಿ ಸೊಸೆಗೆ ಟಿಕೆಟ್ ನೀಡಿದರೆ ಈಗ ಗೆಲುವು ಸಿಗಬಹುದು.
ಆದರೆ, ಭವಿಷ್ಯದ ಫಲಿತಾಂಶ ಬೇರೆಯದೇ ಆಗಲಿದೆ. ಮುಂದಿನ ಚುನಾವಣೆಗೆ ಮತ್ತೆ ಹೊಸಬರಿಗೆ ಟಿಕೆಟ್ ನೀಡಬೇಕಾಗಲಿದೆ. ಮುಂದಿನ ಚುನಾವಣೆಗೆ ಅಭ್ಯರ್ಥಿ ತಯಾರಿ ಮಾಡುವ ಪೂರ್ವ ತಯಾರಿಯಂತೆ ಈ ಚುನಾವಣೆಯನ್ನು ಬಳಸಿಕೊಳ್ಳಬೇಕು. ಹಾಗಾಗಿ ಯುವ ಮುಖಕ್ಕೆ ಮಣೆ ಹಾಕಬೇಕು ಎಂದು ಕೋರ್ ಕಮಿಟಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸಿಎಂ ಉದಾಸಿ ಆಪ್ತನಿಗೆ ಮಣೆ
ಯಡಿಯೂರಪ್ಪ ಸಲಹೆ ತಿರಸ್ಕರಿಸಲು ಸಾಧ್ಯವಾಗದೇ ರೇವತಿ ಉದಾಸಿ ಹಾಗೂ ಶಿವರಾಜ್ ಸಜ್ಜನರ್ ಎರಡು ಹೆಸರನ್ನು ಬಿಜೆಪಿ ಹೈಕಮಾಂಡ್‌ಗೆ ಕಳುಹಿಸಿಕೊಡಲಾಗಿತ್ತು. ಸಂಘಟನೆಯ ಅಡಿ ಬರುವ ಅರುಣ್ ಸಿಂಗ್, ಕಟೀಲ್, ಸಿ.ಟಿ ರವಿ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ ಹೈಕಮಾಂಡ್ ಉದಾಸಿ ಕುಟುಂಬದ ಬದಲು ಉದಾಸಿ ಆಪ್ತನಿಗೆ ಟಿಕೆಟ್ ನೀಡಿದರೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಂತಾಗಲಿದೆ ಎಂದು ಶಿವರಾಜ್ ಸಜ್ಜನರ್ ಹೆಸರನ್ನು ಪ್ರಕಟಿಸಿದೆ ಎನ್ನಲಾಗಿದೆ.
ಸಿಎಂ ಉದಾಸಿಯೇ ಶಿವರಾಜ್ ಸಜ್ಜನರ್‌ಗೆ ರಾಜಕೀಯ ಗುರುವಾಗಿದ್ದಾರೆ. ಉದಾಸಿ ಗರಡಿಯಲ್ಲೇ ಪಳಗಿಕೊಂಡು ಬಂದಿದ್ದಾರೆ. ಉದಾಸಿ ಜನತಾದಳದಿಂದ ಬಿಜೆಪಿಗೆ ಬಂದಾಗ ಅವರ ಹಿಂದೆಯೇ ಬಿಜೆಪಿಗೆ ಬಂದಿರುವ ಶಿವರಾಜ್ ಸಜ್ಜನರ್ ಉದಾಸಿ ರಾಜಕೀಯ ಪಡಸಾಲೆಯಲ್ಲೇ ಬೆಳೆದು ಬಂದಿದ್ದಾರೆ. ಶಾಸಕರಾಗಿ, ಎರಡು ಬಾರಿ ಪರಿಷತ್ ಸದಸ್ಯರಾಗಿ, ಕಳೆದ ಬಾರಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಸಂಘಟನೆಯಲ್ಲಿ ತೊಡಗಿಕೊಂಡಿರುವುದನ್ನು ಪರಿಗಣಿಸಿ ಶಿವರಾಜ್ ಸಜ್ಜನರ್‌ಗೆ ಬಿಜೆಪಿ ಮಣೆ ಹಾಕಿದೆ.
ಬೆಳಗಾವಿಯಲ್ಲಿ ಮಂಗಳಾ ಅಂಗಡಿಗೆ ಪ್ರಯಾಸದ ಗೆಲುವು
ಬೆಳಗಾವಿಯಲ್ಲಿ ಮಂಗಳಾ ಅಂಗಡಿಗೆ ಟಿಕೆಟ್ ನೀಡಿ ಪ್ರಯಾಸದ ಗೆಲುವು ಪಡೆದಿದ್ದನ್ನು ಪರಿಗಣಿಸಿರುವ ಹೈಕಮಾಂಡ್, ಈಗ ಮತ್ತೆ ಅದೇ ಫಲಿತಾಂಶ ಪುನರಾವರ್ತನೆಯಾಗುವುದು ಬೇಡ, ಆಡಳಿತ ಪಕ್ಷ ಇರುವಾಗ ಪ್ರಯೋಗಮಾಡಿ ನಾಯಕತ್ವ ರೂಪಿಸಬೇಕು ಎನ್ನುವ ನಿಲುವನ್ನ ವ್ಯಕ್ತಪಡಿಸಿ ಉದಾಸಿ ಆಪ್ತನಿಗೆ ಟಿಕೆಟ್ ನೀಡಿದೆ. ಈಗಿನ ಫಲಿತಾಂಶ ಏನೇ ಆದರೂ 2023ಕ್ಕೆ ಕ್ಷೇತ್ರ ಬಿಜೆಪಿ ತೆಕ್ಕೆಯಲ್ಲಿಯೇ ಇರಬೇಕು ಎನ್ನುವುದು ಹೈಕಮಾಂಡ್ ಲೆಕ್ಕಾಚಾರವಾಗಿದೆ. ಹಾಗಾಗಿ ಈಗಿನ ಗೆಲುವಿಗಿಂತ ಕ್ಷೇತ್ರದಲ್ಲಿ ಅಭ್ಯರ್ಥಿ ನೆಲೆಯೂರುವಂತೆ ಮಾಡಲು ಹೊರಟಿದೆ.
ಈ ಚುನಾವಣೆಯಲ್ಲಿ ಆಡಳಿತ ಪಕ್ಷ ಮತ್ತು ಸಿಎಂ ತವರು ಜಿಲ್ಲೆ, ಉದಾಸಿ ಅನುಕಂಪ ಕೆಲಸ ಮಾಡಲಿದೆ. ಹಾಗಾಗಿ ಗೆಲುವಿಗೆ ಅಷ್ಟು ಕಷ್ಟಪಡಬೇಕಿಲ್ಲ. ಆದರೆ, ಮುಂದಿನ ಚುನಾವಣೆಗೆ ಈ ಎಲ್ಲ ಅಂಶ ಗಣನೆಗೆ ಬರುವುದಿಲ್ಲ, ಆಗ ಅಭ್ಯರ್ಥಿಯ ಪ್ರಭಾವವೇ ಮುಖ್ಯವಾಗಲಿದೆ ಎಂದು ಸಜ್ಜನರ್‌ಗೆ ಟಿಕೆಟ್ ನೀಡಿದೆ ಎಂದು ಬಿಜೆಪಿ ಆಪ್ತ ಮೂಲಗಳು ತಿಳಿಸಿವೆ.
ರಮೇಶ್ ಬೂಸನೂರ್‌ಗೆ ಟಿಕೆಟ್ ನೀಡಲು ಇದೇ ಕಾರಣ:
ಸಿಂದಗಿಯಲ್ಲಿ ಕಳೆದ ಬಾರಿ 9 ಸಾವಿರ ಮತಗಳಿಂದ ಪರಾಜಿತಗೊಂಡಿದ್ದ ಅಭ್ಯರ್ಥಿಗೆ ಮತ್ತೊಮ್ಮೆ ಅವಕಾಶ ನೀಡಬೇಕು ಎಂದು ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಿ ಶಿಫಾರಸು ಮಾಡಲಾಗಿತ್ತು. ಸ್ಥಳೀಯ ಮಟ್ಟದಲ್ಲಿ ಉತ್ತಮ ಒಡನಾಡ, ಜನಸಂಪರ್ಕ ಹೊಂದಿರುವುದನ್ನು ಪರಿಗಣಿಸಿರುವ ಹೈಕಮಂಡ್ ಮುಂದಿನ ಚುನಾವಣೆ ದೃಷ್ಟಿಯಲ್ಲಿರಿಸಿಕೊಂಡೇ ಈಗ ಮತ್ತೊಮ್ಮೆ ರಮೇಶ್ ಬೂಸನೂರ್‌ಗೆ ಟಿಕೆಟ್ ನೀಡಿದೆ.
ಈ ವಿಚಾರದಲ್ಲಿ ಕೋರ್ ಕಮಿಟಿ ಸಭೆಯಲ್ಲಿ ಆಗಲಿ ಹೈಕಮಾಂಡ್ ಅಂಗಳದಲ್ಲಿ ಆಗಲಿ ಅಷ್ಟಾಗಿ ಚರ್ಚೆ ನಡೆದಿಲ್ಲ. ಕೇವಲ ಹಾನಗಲ್ ಕ್ಷೇತ್ರಕ್ಕೆ ಸೀಮಿತವಾಗಿ ಹೆಚ್ಚಿನ ಚರ್ಚೆ ನಡೆಸಿ ಅಭ್ಯರ್ಥಿ ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಂತರ ನಡೆಯುತ್ತಿರುವ ಮೊದಲ ಉಪ ಸಮರದಲ್ಲಿ ಭವಿಷ್ಯದ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಬಿಜೆಪಿ ಚುನಾವಣಾ ಅಖಾಡಕ್ಕೆ ಇಳಿಯುತ್ತಿದ್ದು, ಬಿಜೆಪಿಯ ಈ ಪ್ರಯೋಗಕ್ಕೆ ಮತದಾರರು ಯಾವ ರೀತಿ ಮಣೆ ಹಾಕಲಿದ್ದಾರೆ. ಸಿಎಂ ಆದ ನಂತರ ಎದುರಾದ ಚೊಚ್ಚಲ ಉಪ ಸಮರದಲ್ಲಿ ಬೊಮ್ಮಾಯಿ ಗೆದ್ದು ಬೀಗುತ್ತಾರಾ ಕಾದು ನೋಡಬೇಕಿದೆ.
ಇದನ್ನೂ ಓದಿ: ಹಾನಗಲ್‌ಗೆ ಶಿವರಾಜ್ ಸಜ್ಜನ್, ಸಿಂಧಗಿಗೆ ರಮೇಶ್ ಭೂಸನೂರು: ಬೈಎಲೆಕ್ಷನ್‌ಗೆ ಬಿಜೆಪಿ ರೆಡಿ