ಬೆಂಗಳೂರು : ಒಂದು ಕೋಟಿ ರೂ.ಗಿಂತ ಕಡಿಮೆ ಇರುವ ಎಲ್ಲಾ ಯೋಜನೆಗಳನ್ನು 10 ಕೋಟಿ ರೂ. ವೆಚ್ಚದ ದೊಡ್ಡ ಯೋಜನೆಗಳೊಂದಿಗೆ ವಿಲೀನಗೊಳಿಸಿ ರಾಜ್ಯ ವಲಯದ ಯೋಜನೆಗಳನ್ನು ಕೇಂದ್ರ ವಲಯದ ಯೋಜನೆಗಳೊಂದಿಗೆ ಸಮೀಕರಿಸಲು ಸಲಹೆ ಮಾಡಲಾಗಿದೆ ಎಂದು ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 17 ಸುಸ್ಥಿರ ಅಭಿವೃದ್ಧಿಗಳಲ್ಲಿ 2019ರ ಇಂಡೆಕ್ಸ್ ಪ್ರಕಾರ ಕರ್ನಾಟಕ 6ನೇ ಸ್ಥಾನದಲ್ಲಿದೆ. 11 ಸುಸ್ಥಿರ ಅಭಿವೃದ್ಧಿಯ ಗುರಿಗಳಲ್ಲಿ ಗಣನೀಯ ಸಾಧನೆ ಮಾಡಿದೆ.
5 ಸುಸ್ಥಿರ ಅಭಿವೃದ್ಧಿಯ ಗುರಿಗಳಲ್ಲಿ ಹೆಚ್ಚಿನ ಸಾಧನೆ ಮಾಡಬೇಕಾಗಿದೆ. ಈ ಎಲ್ಲಾ 17 ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧಿಸಿ ದೇಶದಲ್ಲಿ ಪ್ರಥಮ ಸ್ಥಾನಕ್ಕೆ ಬರಲು ಆಯವ್ಯಯದಲ್ಲಿ ಪೂರಕವಾದ ಯೋಜನೆಗಳನ್ನು ಅಳವಡಿಸಿಕೊಳ್ಳಲು ಸಲಹೆ ನೀಡಲಾಗಿದೆ ಎಂದು ತಿಳಿಸಿದರು.
ಆತ್ಮ ನಿರ್ಭರ ಭಾರತ ಅಭಿಯಾನ : ಪ್ರಧಾನಿ ನರೇಂದ್ರ ಮೋದಿಯವರು ಆತ್ಮ ನಿರ್ಭರ ಭಾರತ ಅಭಿಯಾನ ಘೋಷಣೆ ಮಾಡಿದ್ದು, ಆರ್ಥಿಕತೆ, ಮೂಲ ಸೌಕರ್ಯ, ವ್ಯವಸ್ಥೆ, ಕಂಪನಶೀಲ ಜನಸಂಖ್ಯಾ ಶಾಸ್ತ್ರ ಹಾಗೂ ಬೇಡಿಕೆ ಐದು ಸ್ತಂಭಗಳಾಗಿರುತ್ತವೆ. ಐದು ಹಂತಗಳಲ್ಲಿ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಾಗಿದ್ದು, ಕೃಷಿ, ಆರೋಗ್ಯ, ಮೂಲಸೌಕರ್ಯ, ಕೌಶಲ್ಯ ಇತ್ಯಾದಿಗಳಲ್ಲಿ ಯೋಜನೆಗಳನ್ನು ಘೋಷಿಸಲಾಗಿದೆ.
ಈ ಕಾರ್ಯಕ್ರಮಗಳನ್ನು ಎಲ್ಲಾ ಇಲಾಖೆಗಳು ಹೆಚ್ಚಿನ ಕಾರ್ಯಕ್ರಮಗಳನ್ನು ರೂಪಿಸಲು ಪಿಪಿಪಿ ಮಾದರಿ ತೆಗೆದುಕೊಳ್ಳಲು ನೀಡಲಾಗಿದೆ ಎಂದು ವಿವರಿಸಿದರು. 2021-22ನೇ ಸಾಲಿನ ಇಲಾಖಾವಾರು ಆಯವ್ಯಯ ಪೂರ್ವಭಾವಿ ಸಭೆ ಅಳವಡಿಸಿಕೊಳ್ಳಲು ಸಲಹೆ ನೀಡಲಾಗಿದೆ ಎಂದು ಹೇಳಿದರು.
ಸುಸ್ಥಿರ ಅಭಿವೃದ್ಧಿ ಗುರಿಗಳ ಸೂಚಕದಲ್ಲಿ ವೈದ್ಯರ ಸಂಖ್ಯೆ ಪ್ರತಿ 10,000 ಜನಸಂಖ್ಯೆಗೆ 7,000 ವೈದ್ಯರು ಕಂಡು ಬಂದಿರುವುದರಿಂದ ಕೆಪಿಎಂಇ ಕಾಯ್ದೆಯಡಿ ನೋಂದಾಯಿಸಿಕೊಂಡ ಸಮುದಾಯ ವೈದ್ಯರಿಗೆ ತರಬೇತಿ ನೀಡಿ ಗ್ರಾಮಗಳಲ್ಲಿ ನಿಯೋಜಿಸುವುದು.
ವೈದ್ಯಕೀಯ ಶಿಕ್ಷಣ ಮುಗಿದ ನಂತರ ಪ್ರತಿ ವರ್ಷ ಒಂದು ಗ್ರಾಮ ಪಂಚಾಯಿತಿಯಲ್ಲಿ ಒಬ್ಬರನ್ನು ಇಂಟರ್ನ್‌ಶಿಪ್‌ಗೆ ನಿಯೋಜಿಸಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ನಿರ್ವಹಿಸುವಂತೆ ಕ್ರಮವಹಿಸುವುದು ಹಾಗೂ ಪಿಹೆಚ್‌ಸಿ ಆವರಣದಲಿ ವಸತಿಗೃಹವನ್ನು ನಿರ್ಮಾಣ ಮಾಡುವುದು.
ಆತ್ಮ ನಿರ್ಭರ ಯೋಜನೆಯಡಿ ಪಿಪಿಪಿ ಮಾದರಿ ಇಲಾಖೆಯು ಹಾಸ್ಟೆಲ್ ನಿರ್ಮಾಣ ಮಾಡಲು ಹಾಗೂ ಮೂಲಸೌಕರ್ಯಗಳಿಗೆ ಸಂಬಂಧಿಸಿದಂತೆ ಪ್ರಸ್ತಾವನೆಗಳನ್ನು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗೆ ನೀಡುವುದು, ಸಿಎಸ್ಆರ್ ಯೋಜನೆಯಡಿ ಇಲಾಖೆಯು ಅನುದಾನ ಪಡೆಯಲು ಪ್ರಸ್ತಾವನೆಗಳನ್ನು ಆಕಾಂಕ್ಷಾ ಪೋರ್ಟಲ್‌ನ ಬಳಸಲು ಸೂಚಿಸಲಾಗಿದೆ.
ಇದನ್ನೂ ಓದಿ: ಸ್ನಾತಕೋತ್ತರ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಿದ ಉನ್ನತ ಶಿಕ್ಷಣ ಇಲಾಖೆ: ಇಲ್ಲಿದೆ ಸಂಪೂರ್ಣ ಮಾಹಿತಿ
ಅದೇ ರೀತಿ ಯುವಜನ ಮತ್ತು ಕ್ರೀಡಾ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ, ವಸತಿ, ಸಣ್ಣ ನೀರಾವರಿ, ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ ಮತ್ತು ಜಲಸಂಪನ್ಮೂಲ, ಕಾನೂನು, ಸಹಕಾರ, ಅಲ್ಪಸಂಖ್ಯಾತರ ಕಲ್ಯಾಣ, ಸಮಾಜ ಕಲ್ಯಾಣ, ಪ್ರವಾಸೋದ್ಯಮ, ಕಾರ್ಮಿಕ, ಸಾರಿಗೆ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ಉನ್ನತ ಶಿಕ್ಷಣ, ಮೂಲಸೌಕರ್ಯ, ವಾಣಿಜ್ಯ ಮತ್ತು ಕೈಗಾರಿಕಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮೀನುಗಾರಿಕೆ, ಪಶುಸಂಗೋಪನೆ, ರೇಷ್ಮೆ, ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ, ಕೃಷಿ ಹಾಗೂ ತೋಟಗಾರಿಕೆಯೂ ಸೇರಿದಂತೆ ಇತರ ಇಲಾಖೆಗಳಿಗೆ ಸಂಬಂಧಿಸಿದಂತೆ ಹಲವು ಸಲಹೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.