ಬೆಂಗಳೂರು: ರಾಜ್ಯದಲ್ಲಿ ಕೇಳಿ ಬಂದಿರುವ ಬಿಟ್ ಕಾಯಿನ್ ಹಗರಣದ ಬಗ್ಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಪ್ತ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, #BitcoinScamನ ಒಳಸುಳಿಗಳನ್ನು ಕಂಡುಹಿಡಿಯಲಾಗುತ್ತಿದೆ ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಬಿಟ್ ಕಾಯಿನ್ ಹಗರಣದ ಸಂಬಂಧ ಗೃಹ ಸಚಿವ ಅಮಿತ್ ಶಾ ಹಾಗೂ ಸಿಎಂ ಬೊಮ್ಮಾಯಿ ಅವರು ಪ್ರಶ್ನೆಗಳಿಗೆ ಉತ್ತರಿಸುವಂತೆ ಒತ್ತಾಯಿಸಿದ್ದಾರೆ.
ಕರ್ನಾಟಕದ ಬಿಜೆಪಿ ಸರ್ಕಾರದ ಅಡಿಯಲ್ಲಿ ನಡೆದ ಭಾರತದ ಅತಿದೊಡ್ಡ ಬಿಟ್ ಕಾಯಿನ್ ಹಗರಣದ ತನಿಖೆ ಮಾಡಲು FBI ಭಾರತದಲ್ಲಿದೆಯೇ?. ಹಾಗಿದ್ದರೆ, ತನಿಖೆಯ ಹಾಗೂ ರಾಜಕೀಯ ವ್ಯಕ್ತಿಗಳು ಸೇರಿದಂತೆ ಶಂಕಿತರ ವಿವರಗಳನ್ನು ಬಿಡುಗಡೆ ಮಾಡುವಿರಾ? ಎಂದು ಪ್ರಶ್ನಿಸಿದ್ದಾರೆ.
ಎಷ್ಟು ಬಿಟ್‌ಕಾಯಿನ್‌ಗಳನ್ನು ಕದ್ದಿದ್ದಾರೆ ಮತ್ತು ಅವು ಎಷ್ಟು ಮೌಲ್ಯದ್ದು, ಕರ್ನಾಟಕದಲ್ಲಿ ಯಾರ್ಯಾರು ಭಾಗಿಯಾದ್ದಾರೆ?. ಕದ್ದ ಬಿಟ್‌ಕಾಯಿನ್‌ಗಳನ್ನ ಆಪಾದಿತ ಹ್ಯಾಕರ್ ಶ್ರೀಕೃಷ್ಣನ ವ್ಯಾಲೆಟ್‌ನಿಂದ ವರ್ಗಾಯಿಸಲಾಗಿದೆಯೇ? ಎಂದು ಕೇಳಿದ್ದಾರೆ.
ಹಗರಣ ಬಯಲಿಗೆ ಅಂದಿನ ಗೃಹ ಸಚಿವರಾಗಿದ್ದ ಬೊಮ್ಮಾಯಿ ಹಾಗೂ ಇತರ ಸಚಿವರ ಜವಾಬ್ದಾರಿ ಹಾಗೂ ಪಾತ್ರ ಏನು?. ಇಂಟರ್ ಪೋಲ್ ಗೆ ಈ ಹಗರಣದ ಬಗ್ಗೆ ಮಾಹಿತಿ ಏಕೆ ನೀಡಿಲ್ಲ?. ಇಂಟರ್ ಪೋಲ್ ಗೆ ಮಾಹಿತಿ ನೀಡಲು ಐದು ತಿಂಗಳು ವಿಳಂಬ ಮಾಡಿದ್ದೇಕೆ?. ಈ ಬಗ್ಗೆ ಬಿಜೆಪಿ ಸರ್ಕಾರ ಎನ್‌ಐಎ, ಇಡಿಗೆ ಮಾಹಿತಿ ಏಕೆ ನೀಡಿಲ್ಲ ಎಂದು ಸುರ್ಜೇವಾಲ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ಓದಿ : ಜಮ್ಮು ಕಾಶ್ಮೀರದ ಅನಂತನಾಗ್ನಲ್ಲಿ ಎನ್ಕೌಂಟರ್.. ಇಂಟರ್ನೆಟ್ ಸೇವೆ ಸ್ಥಗಿತ