ಬೆಂಗಳೂರು : ಹಿಂಬದಿಯಿಂದ ಅಪರಿಚಿತ ವಾಹನ ಗುದ್ದಿದ ಪರಿಣಾಮ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟಿರುವ ಘಟನೆ ಬಾಣಸವಾಡಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ. ರಾಮಮೂರ್ತಿನಗರದಿಂದ ಹೆಬ್ಬಾಳದಲ್ಲಿರುವ ಮನೆಗೆ ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಶ್ವೇತಾ (23) ಸಾವನ್ನಪ್ಪಿದ ಮಹಿಳೆ.
ನಿನ್ನೆ ತಡರಾತ್ರಿ ವೇಳೆ ರಿಂಗ್ ರೋಡ್ನ ಹೆಣ್ಣೂರು ಅಂಡರ್ ಪಾಸ್ ಬಳಿ ಆನಂದ್(28) ಹಾಗೂ ಪತ್ನಿ ಶ್ವೇತಾ(23) ಸ್ಕೂಟರ್ನಲ್ಲಿ ಹೋಗುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಅಪರಿಚಿತ ವಾಹನ ವೇಗವಾಗಿ ಬಂದು ಸ್ಕೂಟರ್ಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿಯಾಗಿದೆ. ಪರಿಣಾಮ ಹಿಂಬದಿ ಸವಾರರಾಗಿದ್ದ ಶ್ವೇತಾಗೆ ಸೊಂಟ ಹಾಗೂ ಕೈ-ಕಾಲುಗಳಿಗೆ ತೀವ್ರ ಪೆಟ್ಟಾಗಿದೆ.
ಸ್ಥಳೀಯರ ನೆರವಿನಿಂದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗ ಮಧ್ಯೆ ಶ್ವೇತಾ ಮೃತಪಟ್ಟಿದ್ದಾರೆ. ಅವರ ಪತಿ ಆನಂದ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಕಾರಣರಾದ ಲಾರಿ ಚಾಲಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಪಘಾತವೆಸಗಿ ಪರಾರಿಯಾಗಿರುವ ವಾಹನ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಕೆಲಸ ಕೇಳಿ ಬಂದ ಯುವತಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ ದುರುಳರು, ಮೂವರ ಬಂಧನ