ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಭಾಸ್ಕರ್ ರಾವ್ ಅವರ ನೇಮಕಾತಿ ಆದೇಶ ಪ್ರಶ್ನಿಸಿ ಕರ್ನಾಟಕ ಮೀಸಲು ಪೊಲೀಸ್ ಪಡೆಗೆ ವರ್ಗಾವಣೆಗೊಂಡ ಅಲೋಕ್ ಕುಮಾರ್ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಪ್ರಮುಖ ಕಾರಣವಿಲ್ಲದೆ ಯಾವುದೇ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತಿಲ್ಲ. ಹೀಗಾಗಿ, ಕೇಂದ್ರೀಯ ಆಡಳಿತಾತ್ಮಕ ಟ್ರಿಬ್ಯುನಲ್ (ಸಿಎಟಿ)ಗೆ ಅಲೋಕ್ ಕುಮಾರ್ ಪರ ವಕೀಲ ಶಂಕರ್ ಅರ್ಜಿ ಸಲ್ಲಿಸಲಿದ್ದಾರೆ.
ಈ ಅರ್ಜಿಯಲ್ಲಿ ಕೇವಲ 47 ದಿನಗಳಲ್ಲಿ ಹೇಗೆ ವರ್ಗಾವಣೆ ಸಾಧ್ಯ? ಯಾವುದೇ ಐಪಿಎಸ್ ಅಧಿಕಾರಿ ವರ್ಗಾವಣೆ ಆಗುವುದಕ್ಕೆ ಒಂದು ವರ್ಷ ಆಗಬೇಕು. ಆದರೆ, ವರ್ಷ ಮುಗಿಯದೇ ಹೇಗೆ ವರ್ಗಾವಣೆ ಮಾಡಿದ್ದಿರಾ ಎಂದು ಪ್ರಶ್ನಿಸಲಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೆಬಲ್ನಿಂದ ಹಿಡಿದು ಡಿಜಿವರೆಗೂ ಕೆಲ ನಿಯಮಗಳಿವೆ ಎಂದು ಅರ್ಜಿಯಲ್ಲಿ ಉಲ್ಲೇಖ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.