ಬೆಂಗಳೂರು : ದೇಶದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದೆ. ಮುಂಬೈ ಮಾದರಿಯಲ್ಲಿ ಬೆಂಗಳೂರಿನಲ್ಲಿಯೂ ಮಾಸ್ಕ್ ಧರಿಸುವುದಕ್ಕೆ ವಿನಾಯಿತಿ ನೀಡಬೇಕು ಎಂದು ವಿಧಾನ ಪರಿಷತ್ನಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಭಾರತಿ ಶೆಟ್ಟಿ ಅವರು, ಬೆಂಗಳೂರಿನಲ್ಲಿ ಮಾಸ್ಕ್ ಹಾಕುವ ನಿಯಮದಿಂದ ವಿನಾಯಿತಿ ಕೊಡಬೇಕು ಎಂದು ಒತ್ತಾಯಿಸಿದರು.
ಮುಂಬೈ ಮಹಾನಗರ ಪಾಲಿಕೆ(BMC) ಮಾಸ್ಕ್ ಕಡ್ಡಾಯ ಎಂಬ ನಿಯಮ ಕೈ ಬಿಟ್ಟಿದೆ. ಕೊರೊನಾ ಈಗ ಬಹುತೇಕ ಕಡಿಮೆ ಆಗಿದೆ. ಬೆಂಗಳೂರಿನಲ್ಲಿ ಮಾಸ್ಕ್ ಹಾಕದೆ ಇದ್ದರೆ ದಂಡ ಹಾಕುತ್ತಿದ್ದಾರೆ. ಕೊರೊನಾ ಕಡಿಮೆ ಆಗಿರುವುದರಿಂದ ಬೆಂಗಳೂರಿನಲ್ಲೂ 'ಮಾಸ್ಕ್ ಕಡ್ಡಾಯ' ಎಂಬ ನಿಯಮವನ್ನ ಕೈ ಬಿಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ಸದಸ್ಯರ ಪ್ರಸ್ತಾಪಕ್ಕೆ ಆರೋಗ್ಯ ಸಚಿವ ಡಾ.ಸುಧಾಕರ್ ಅವರಿಂದ ಉತ್ತರ ಕೊಡಿಸುವುದಾಗಿ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಟಿಪ್ಪು ಪಠ್ಯ ಕೈಬಿಡಬೇಡಿ : ಟಿಪ್ಪು ಇತಿಹಾಸ ಪಠ್ಯದಿಂದ ಕೈ ಬಿಡಬಾರದು ಎಂದು ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಸದಸ್ಯ ಸಲೀಂ ಅಹ್ಮದ್ ಒತ್ತಾಯಿಸಿದ್ದಾರೆ. ವಿಧಾನ ಪರಿಷತ್ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಲೀಂ ಅಹ್ಮದ್, ರಾಜ್ಯದ ಪಠ್ಯದಲ್ಲಿ ಟಿಪ್ಪು ಚರಿತ್ರೆ ಹಲವು ವಿಷಯಗಳನ್ನ ಕೈ ಬಿಡುವ ಕೆಲಸ ಆಗಿದೆ.
ಟಿಪ್ಪು ಸುಲ್ತಾನ್ ಇತಿಹಾಸವನ್ನ ಮಕ್ಕಳಿಗೆ ತಿಳಿಸಬೇಕು. ಟಿಪ್ಪು ಬಗ್ಗೆ ಅರಿವು ಮೂಡಿಸುವುದು ಸರ್ಕಾರದ ಕರ್ತವ್ಯ. ನಿರ್ದಿಷ್ಟ ಸಮಾಜವನ್ನು ಗುರಿಯಾಗಿಸಿಕೊಂಡು ತಯಾರಿಸಿರುವ ಈ ವರದಿ ಜಾರಿ ಮಾಡಬಾರದು. ಪರಿಷ್ಕರಣೆಗೊಂಡ ಪಠ್ಯ ಪುಸ್ತಕ ವರದಿ ಜಾರಿಗೊಳಿಸದಂತೆ ಒತ್ತಾಯಿಸಿದರು. ಸದಸ್ಯರ ಪ್ರಶ್ನೆಗೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರಿಂದ ಉತ್ತರ ಕೊಡಿಸುವುದಾಗಿ ಸಭಾನಾಯಕರು ಭರವಸೆ ನೀಡಿದರು.
ಪ್ರಾಂಶುಪಾಲರನ್ನ ನೇಮಿಸಿ : ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗಳಿಗೆ ನೇಮಕ ಮಾಡುವಂತೆ ಶೂನ್ಯವೇಳೆಯಲ್ಲಿ ಸರ್ಕಾರಕ್ಕೆ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಒತ್ತಾಯಿಸಿದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರಿಂದ ಉತ್ತರ ಕೊಡಿಸುವುದಾಗಿ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಇದನ್ನೂ ಓದಿ: ತುಂಬೆಯಲ್ಲಿರುವ ನೀರಾ ಘಟಕ ಪುನಶ್ಚೇತನಕ್ಕೆ ಕ್ರಮ: ಸಚಿವ ಮುನಿರತ್ನ