ಬೆಂಗಳೂರು: ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲಿ ಪಾದರಾಯನಪುರದ ಮಹಿಳೆಯೊಬ್ಬರು ನಿನ್ನೆ ಹೆರಿಗೆ ವೇಳೆ ತೀವ್ರ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದರು. ಈ ಹಿನ್ನೆಲೆ ಆಕೆಯ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಅದರ ವರದಿ ನೆಗೆಟಿವ್ ಬಂದಿದೆ.
ನಿನ್ನೆ ಪಾದರಾಯನಪುರದ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸಲಾಗಿತ್ತು. ಹೆರಿಗೆ ಬಳಿಕ ಮಹಿಳೆ ತೀವ್ರ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದರು. ಇದರಿಂದ ಆತಂಕಗೊಂಡು ಮಹಿಳೆಯ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ರಾಜೀವ್ ಗಾಂಧಿ ಎದೆ ರೋಗ ಆಸ್ಪತ್ರೆಗೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಜೊತೆಗೆ 20 ಸಿಬ್ಬಂದಿಯನ್ನು ಕ್ವಾರಂಟೈನ್ನಲ್ಲಿ ಇಡಲಾಗಿತ್ತು.
ಸಾವನ್ನಪ್ಪಿದ್ದ ಮಹಿಳೆಯ ವರದಿ ಬಂದಿದ್ದು, ಕೋವಿಡ್-19 ಇಲ್ಲ ಎಂದು ಖಚಿತಪಡಿಸಲಾಗಿದೆ. ಇದರಿಂದ ಆಸ್ಪತ್ರೆಯ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಇತ್ತೀಚೆಗೆ ರಾಜಾಜಿನಗರದ ಇಎಸ್ಐ ಆಸ್ಪತ್ರೆ ಸಿಬ್ಬಂದಿ ವೈಯಕ್ತಿಕ ಸುರಕ್ಷತಾ ಸಾಧನ (ಪಿಪಿಇ) ಕಿಟ್ ಹಾಗೂ ಸೂಕ್ತ ಸುರಕ್ಷತೆ ನೀಡುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರು.