ಬೆಂಗಳೂರು: ಕೆಜಿ ಹಳ್ಳಿ - ಡಿಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿಗಳು ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಇಂದು 30 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಇದಕ್ಕೂ ಮುನ್ನ ಠಾಣೆಯಿಂದ ಆರೋಪಿಗಳನ್ನು ಹೊರಗಡೆ ಕರೆದುಕೊಂಡು ಬರುವಾಗ, ಪೊಲೀಸರನ್ನು ಉದ್ದೇಶಿಸಿ, ಸರ್.. ನಾವೇನು ತಪ್ಪು ಮಾಡಿಲ್ಲ, ಗಲಾಟೆ ದಿನದಂದು ಮನೆಯಲ್ಲೇ ಇದ್ದೆ ಎಂದು ಗುಂಪಿನಲ್ಲಿದ್ದ ಆರೋಪಿಯೋರ್ವ ಮನವಿ ಮಾಡಿಕೊಂಡಿದ್ದಾನೆ. ಬಳಿಕ ಮತ್ತೋರ್ವ ಆರೋಪಿ, ಮಾಧ್ಯಮಗಳ ಕ್ಯಾಮೆರಾ ಕಾಣಿಸುತ್ತಿದ್ದಂತೆ ಯಾಕೆ ಶೂಟ್ ಮಾಡ್ತೀರಾ, ನಿಮಗೆ ಬೇರೆ ಏನು ಸುದ್ದಿ ಇಲ್ವಾ? ನಿಮ್ಮಿಂದಲೇ ಎಲ್ಲ ಆಗಿದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಪ್ರಕರಣ ಸಂಬಂಧ ಈವರೆಗೆ 350ಕ್ಕಿಂತ ಹೆಚ್ಚು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಘಟನೆ ಕೇಂದ್ರ ಬಿಂದುವಾದ ನವೀನ್, ಗಲಭೆ ಪ್ರಕರಣದ ಪ್ರಮುಖ ಆರೋಪಿಗಳಾದ ಎಸ್ಡಿಪಿಐ ಮುಖಂಡ ಮುಜಾಯಿದ್ ಪಾಷಾ, ಸಲೀಂ, ಕಾರ್ಪೋರೇಟರ್ರ ಪತಿ ಕರೀಂ ಪಾಷಾ ಸೇರಿದಂತೆ 15ಕ್ಕೂ ಹೆಚ್ಚು ಆರೋಪಿಗಳು ಸಿಸಿಬಿ ಪೊಲೀಸರ ವಶದಲ್ಲಿದ್ದಾರೆ.