ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ 8 ವಲಯಗಳಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತ ಲಸಿಕೆ ಅಭಿಯಾನ ಕಾರ್ಯಕ್ರಮ 'ವಿಶೇಷ ಲಸಿಕಾಕರಣ ಅಭಿಯಾನ' ಯಶಸ್ವಿಯಾಗಿದೆ. ಒಟ್ಟಾರೆ ಲಸಿಕೆ ವಿತರಣೆಯಲ್ಲಿ ಇಡೀ ದೇಶದಲ್ಲೇ ನಂಬರ್ ಒನ್ ಎನಿಸಿಕೊಂಡಿದೆ.
ಅಭಿಯಾನದಲ್ಲಿ 65 ಸಾವಿರ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಆದರೆ ನಿಗದಿತ ಗುರಿಗಿಂತ 1,68,958 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಪಾಲಿಕೆ ತಿಳಿಸಿದೆ. ಆದರೆ 18ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವಲ್ಲಿ ಬಿಬಿಎಂಪಿ ವಿಫಲ ಎನ್ನುವ ಅಪಸ್ವರ ಕೇಳಿ ಬಂದಿದೆ.
ಪ್ರಧಾನಿ ನರೇಂದ್ರ ಮೋದಿರವರು ಜೂನ್ 21ರಿಂದ 18ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕರಿಗೆ ಉಚಿತವಾಗಿ ಕೊವಿಡ್-19 ಲಸಿಕೆ ಹಾಕಲಾಗುವುದು ಎಂದು ಘೋಷಣೆ ಮಾಡಿದರು. ಆದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಹಲವಾರು ಕಡೆಗಳಲ್ಲಿ ಪ್ರಥಮ ಆದ್ಯತೆ ಇರುವವರಿಗೆ ಮಾತ್ರ ಲಸಿಕೆ ಹಾಕಲಾಗುವುದು, ಇನ್ನು ವ್ಯಾಕ್ಸಿನ್ ಬಂದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು ಪ್ರಧಾನಿಗಳ ಆದೇಶವನ್ನು ಪಾಲಿಸಿ, ಜನರಿಗೆ ಗೊಂದಲ ಮಾಡಬೇಡಿ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೋವಿಡ್-19 ಲಸಿಕೆ ಹಾಕಬೇಕು ಎಂದು ಪಾಲಿಕೆ ವಿರೋಧ ಪಕ್ಷದ ಮಾಜಿ ನಾಯಕ ಅಬ್ದುಲ್ ವಾಜಿದ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಸಚಿವ ಸಂಪುಟ ಸಭೆಯಲ್ಲಿ ಹಿರಿಯ ಸಚಿವರಿಬ್ಬರ ನಡುವೆ ವಾಗ್ವಾದ!
ನಗರದ ಎಲ್ಲಾ ವಲಯಗಳಲ್ಲಿ ಮೈಕ್ರೋ ಪ್ಲಾನ್ ಮಾಡಿಕೊಂಡು ಅತ್ಯಂತ ಯಶಸ್ವಿಯಾಗಿ ಲಸಿಕಾಕರಣ ಅಭಿಯಾನವನ್ನು ನಡೆಸಲಾಗಿದೆ. ಈ ಪೈಕಿ ಪಾಲಿಕೆಯ ಎಂಟೂ ವಲಯಗಳಲ್ಲಿ ಸೆಷನ್‌ಗಳನ್ನು(ಸ್ಥಳಗಳು) ಏರ್ಪಡಿಸಲಾಗಿದೆ. ಹೆಚ್ಚು ಲಸಿಕಾಕರಣ ಸಿಬ್ಬಂದಿಯ ಜೊತೆಗೆ ವೈದ್ಯರುಗಳು, ಸ್ಟಾಫ್ ನರ್ಸ್, ಆಶಾ ಕಾರ್ಯಕರ್ತೆಯರು, ಹೋಂಗಾರ್ಡ್‌ಗಳು, ಮಾರ್ಷಲ್‌ಗಳನ್ನು ನಿಯೋಜನೆ ಮಾಡಿಕೊಂಡು ಲಸಿಕೆ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಪಾಲಿಕೆ ತಿಳಿಸಿದೆ.
ಪಾಲಿಕೆಯಿಂದ ಅಭಿಯಾನದ ಬಗ್ಗೆ ಜಾಗೃತಿ
ನಗರದಲ್ಲಿ ಲಸಿಕಾ ಅಭಿಯಾನ ಹಮ್ಮಿಕೊಂಡಿರುವ ಬಗ್ಗೆ ಸ್ಥಳೀಯರಿಗೆ ಮುಂಚಿತವಾಗಿಯೇ ಮನೆ ಮನೆ ತೆರಳಿ ಮಾಹಿತಿ ನೀಡಲಾಗಿತ್ತು. ಜೊತೆಗೆ ಕಾರ್ಖಾನೆ, ಹೋಟೆಲ್, ಕಟ್ಟಡ ಮಾಲೀಕರು ಸೇರಿದಂತೆ ಇನ್ನತರೆ ಮುಖ್ಯಸ್ಥರಿಗೆ ಲಸಿಕೆ ನೀಡುವ ಬಗ್ಗೆ ಮಾಹಿತಿ ನೀಡಲಾಗಿತ್ತು. ಈ ಪೈಕಿ ಲಸಿಕಾಕರಣ ವೇಳೆ ಹೆಚ್ಚು ಮಂದಿ ಪಾಲ್ಗೊಂಡು ಲಸಿಕೆ ಪಡೆದಿದ್ದಾರೆ. ಲಸಿಕೆ ಪಡೆಯುವ ಸ್ಥಳದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಪ್ರತಿಯೊಬ್ಬರೂ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ಪಡೆದುಕೊಂಡಿದ್ದಾರೆ. ಬಹುತೇಕ ಕಡೆ ಹಿರಿಯ ಅಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಅಭಿಯಾನದ ಬಗ್ಗೆ ಪರಿಶೀಲಿಸಿದ್ದಾರೆ ಎಂದು ಪಾಲಿಕೆ ಹೇಳಿದೆ.
ನಗರದಲ್ಲಿ ನಿನ್ನೆ ಸರ್ಕಾರಿ ಕಚೇರಿಗಳು, ಬೀದಿ ಬದಿ ವ್ಯಾಪಾರಿಗಳು, ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ, ಕ್ಯಾಬ್/ಆಟೋ ಚಾಲಕರು, ಎಪಿಎಂಸಿ ಮಾರುಕಟ್ಟೆಯಲ್ಲಿನ ವರ್ತಕರು, ಬ್ಯಾಂಕ್ ಸಿಬ್ಬಂದಿ, ಹೋಟೆಲ್ ಸಿಬ್ಬಂದಿ, ಕಟ್ಟಡ ಕಾರ್ಮಿಕರು ಸೇರಿದಂತೆ ಇನ್ನಿತರೆ ಕಡೆ ಸೆಷನ್‌ಗಳನ್ನು ಮಾಡಿ ಲಸಿಕೆ ನೀಡಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಸಚಿವ ಸಂಪುಟ ಸಭೆಯಿಂದ ರೇಣುಕಾಚಾರ್ಯಗೆ ಸಿಹಿ ಸುದ್ದಿ; ಸಚಿವ ಸಿ.ಪಿ.ಯೋಗೇಶ್ವರ್ ಕ್ಯಾತೆ!
ಪಾಲಿಕೆಯ ಪ್ರಕಾರ ಲಸಿಕಾ ಕರಣದ ಯಶಸ್ಸಿನ ಪ್ರಮುಖ ಅಂಶಗಳು
1. ವಿಶೇಷ ಲಸಿಕಾಕರಣ ಅಭಿಯಾನದ ಅಂಗವಾಗಿ ನಗರದಲ್ಲಿ ಒಟ್ಟು 1,44,000 ಡೋಸ್ ಕೋವಿಶೀಲ್ಡ್ ಹಾಗೂ 43,000 ಡೋಸ್ ಕೋವಾಕ್ಸಿನ್ ಲಸಿಕೆ ಕೇಂದ್ರಗಳಿಗೆ ವಿತರಿಸಲಾಗಿದೆ.
2. ಮುಖ್ಯ ಆಯುಕ್ತ ಗೌರವ್ ಗುಪ್ತ ಲಸಿಕಾಕರಣ ಅಭಿಯಾನದಲ್ಲಿ 1 ಲಕ್ಷ ಮಂದಿಕ್ಕಿಂತಲೂ ಹೆಚ್ಚು ಲಸಿಕೆ ನೀಡುವ ಬಗ್ಗೆ ಸೂಚಿಸಿದ್ದರು. ಅದರಂತೆ ಒಂದೇ ದಿನದಲ್ಲಿ 1.68 ಲಕ್ಷ ಲಸಿಕೆಗಳನ್ನು ನೀಡಲಾಗಿದೆ. ಇದು ದಿನನಿತ್ಯದ ಅತಿದೊಡ್ಡ ಸಾಧನೆಯಾಗಿದೆ. ಜೂನ್ 4 ರಂದು 1.17 ಲಕ್ಷ ಮಂದಿಗೆ ಲಸಿಕೆ ನೀಡಲಾಗಿತ್ತು.
3. ನಗರದಲ್ಲಿ ಹೆಚ್ಚು ವ್ಯಾಕ್ಸಿನೇಷನ್ ಡ್ರೈವ್ ಮಾಡುವ ದೃಷ್ಟಿಯಿಂದ ಸೆಷನ್ ಸೈಟ್‌ಗಳು ದೈನಂದಿನ ಸರಾಸರಿ 300 ರಿಂದ 528ಕ್ಕೆ ಹೆಚ್ಚಿಸಲಾಗಿತ್ತು. ಅದರಂತೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಾಮಾನ್ಯ ಆಸ್ಪತ್ರೆಗಳಲ್ಲಿ 160 ಸೈಟ್‌ಗಳು ಮತ್ತು ಕೆಲಸದ ಸ್ಥಳಗಳಲ್ಲಿ 368 ಸೈಟ್‌ಗಳು ಒಳಗೊಂಡಿದೆ.
4. ಪಾಲಿಕೆ ವತಿಯಿಂದ ಒಟ್ಟು 528 ವ್ಯಾಕ್ಸಿನೇಟರ್‌ಗಳನ್ನು, ವೆರಿಫೈಯರ್ ಗಳನ್ನು ನಿಯೋಜಿಸಲಾಗಿತ್ತು. ಇದಲ್ಲದೆ, ವಿವಿಧ ಶುಶ್ರೂಷಾ ಕಾಲೇಜುಗಳಿಂದ ಸ್ವಯಂಸೇವಕ ವ್ಯಾಕ್ಸಿನೇಟರ್‌ಗಳನ್ನು ಸಜ್ಜುಗೊಳಿಸಲಾಗಿದೆ.
5. ಲಸಿಕಾಕರಣ ಮೇಲ್ವಿಚಾರಣೆ ಮಾಡಲು ಮತ್ತು ಕರ್ತವ್ಯದಲ್ಲಿರುವ ಸಿಬ್ಬಂದಿಯನ್ನು ಬೆಂಬಲಿಸಲು 8 ವಲಯ ಆರೋಗ್ಯ ಅಧಿಕಾರಿಗಳು, 28 ಆರೋಗ್ಯ ವೈದ್ಯಕೀಯ ಅಧಿಕಾರಿಗಳು(ಎಂಒಹೆಚ್) ದಿನವಿಡೀ ಸೆಷನ್‌ಗಳು ನಡೆಯುವ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
6. ಎಲ್ಲಾ ಅರ್ಹ ಕ್ಷೇತ್ರಗಳ ಫಲಾನುಭವಿಗಳನ್ನು ಸುಮಾರು 978 ಆಶಾ ಕಾರ್ಯಕರ್ತರು, 429 ಎಎನ್ಎಂಗಳು ಮೈದಾನದಲ್ಲಿ ಕೆಲಸ ಮಾಡಿದ್ದಾರೆ. ಅಲ್ಲದೆ ಚುನಾಯಿತ ಪ್ರತಿನಿಧಿಗಳು ಮತ್ತು ವಿವಿಧ ಸರ್ಕಾರೇತರ ಸಂಸ್ಥೆಗಳು ದಿನವಿಡೀ ಡ್ರೈವ್‌ಗೆ ನಿರಂತರವಾಗಿ ಬೆಂಬಲ ಕೊಟ್ಟಿದ್ದಾರೆ.