ಬೆಂಗಳೂರು: ಚಿನ್ನದ ಗಟ್ಟಿ ಖರೀದಿಸಲು ಚಿಕ್ಕಬಳ್ಳಾಪುರದಿಂದ ನಗರಕ್ಕೆ ಬಂದಿದ್ದ ಜುವೆಲರ್ಸ್ ಮಾಲೀಕನ ಬ್ಯಾಗನ್ನು ದುಷ್ಕರ್ಮಿಗಳು ಬ್ಲೇಡ್‌ನಿಂದ ಕೊಯ್ದು, 3.57 ಲಕ್ಷ ರೂ. ಹಣ ಹಾಗೂ 28 ಗ್ರಾಂ ಚಿನ್ನದ ಸರ ಕದ್ದಿರುವ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ ನಿವಾಸಿ ಮೆಹರಾಮ್ (50) ಚಿನ್ನಾಭರಣ, ಹಣ ಕಳೆದುಕೊಂಡವರು. ಮೆಹರಾಮ್ ಚಿಕ್ಕಬಳ್ಳಾಪುರದಲ್ಲಿ ಮಹದೇವ್ ಜುವೆಲರ್ಸ್ ಹೆಸರಿನ ಚಿನ್ನದ ಅಂಗಡಿ ಹೊಂದಿದ್ದಾರೆ. ಜ.10ರಂದು ಮಧ್ಯಾಹ್ನ 3.30ಕ್ಕೆ ಚಿನ್ನದ ಗಟ್ಟಿ ಖರೀದಿಸುವ ಸಲುವಾಗಿ ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಬಂದಿದ್ದರು.
ಎಸ್.ಪಿ ರಸ್ತೆಯ ಹೆಚ್.ಕೆ.ಕೆ ಲೇನ್ ಮೂಲಕ ಹೋಗುತ್ತಿದ್ದಾಗ ಜನಜಂಗುಳಿ ಹೆಚ್ಚಿತ್ತು. ಬಳಿಕ ತಮ್ಮ ಬಳಿಯಿದ್ದ ಬ್ಯಾಗ್‌ನ್ನು ಪರಿಶೀಲಿಸಿದಾಗ ಬ್ಯಾಗ್‌ನ ಒಂದು ಬದಿಯನ್ನು ಬ್ಲೇಡ್‌ನಿಂದ ಕುಯ್ದು ಅದರಲ್ಲಿದ್ದ ಹಣ, ಚಿನ್ನ ಕದ್ದಿರುವುದು ಗೊತ್ತಾಗಿದೆ. ಮೆಹರಾಮ್ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
(ಇದನ್ನೂ ಓದಿ: Watch... ವ್ಹಿಲೀಂಗ್ ಮಾಡಿ ಲಾಂಗ್ ಹಿಡಿದುಕೊಂಡು ಕ್ಯಾಮೆರಾಗೆ ಪೋಸ್.. ಆರೋಪಿ ಸೆರೆಗೆ ಖಾಕಿ ತೀವ್ರ ಶೋಧ!)