ಬೆಂಗಳೂರು: ಕೊರೊನಾ ಸೋಂಕು ಹರಡದಂತೆ ಹೇರಲಾದ ಲಾಕ್ಡೌನ್ ಅನ್ನು ಕೊಂಚ ಮಟ್ಟಿಗೆ ಸಡಿಲಿಕೆ ಮಾಡಲಾಗಿದೆ. ಹೀಗಾಗಿ ವಾಹನ ಸವಾರರು ತಮ್ಮ ವಾಹನಗಳಲ್ಲಿ ಓಡಾಡುತ್ತಿದ್ದಾರೆ. ಆದರೆ ಸದ್ಯ ಪೊಲೀಸರು ಮೊದಲಿನಂತೆ ರಸ್ತೆಯಲ್ಲಿ ವಾಹನ ಅಡ್ಡಹಾಕಿ ದಂಡ ವಿಧಿಸುವುದನ್ನ ಕೊಂಚ ಕಡಿಮೆ ಮಾಡಿದ್ದಾರೆ. ಹೀಗಾಗಿ ವಾಹನ ಸವಾರರು ಪೊಲೀಸರಿಲ್ಲ ಅಂತ ನಿಯಮ ಉಲ್ಲಂಘಿಸಿ ಓಡಾಡುವುದೂ ಕೂಡ ಕಂಡು ಬರ್ತಿದೆ.
ಆದರೆ ಪೊಲೀಸರು ಇಂಥವರಿಗೆ ದಂಡ ವಿಧಿಸಲು ಸ್ಮಾರ್ಟ್ ವರ್ಕ್ ಮೊರೆ ಹೋಗಿದ್ದಾರೆ. ರಸ್ತೆ ಪಕ್ಕದಲ್ಲೇ ಟ್ರಾಫಿಕ್ ಪೊಲೀಸ್ ಇಂಟರ್ಸೆಪ್ಟರ್ ನಿಲ್ಲಿಸಿ ವಾಹನದ ವೇಗವನ್ನು ಗಮನಿಸುತ್ತಿದ್ದಾರೆ.
ಹೆಲ್ಮೆಟ್ ಹಾಕದೇ ನಿಯಮ ಉಲ್ಲಂಘನೆ ಮಾಡುವವರ ಬೈಕ್ ಸಂಖ್ಯೆ ಬರೆದಿಟ್ಟುಕೊಳ್ಳುತ್ತಾರೆ. ಈಗಾಗಲೇ ಗಂಟೆಗೆ 30 ಕಿಲೋಮೀಟರ್ ವೇಗದಲ್ಲಿ ಚಾಲನೆ ಮಾಡಬೇಕೆಂದು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಹೀಗಾಗಿ ನಿಯಮ ಮೀರುವ ವಾಹನಗಳ ನಂಬರ್ ಬರೆದು ನಂತರ ಮನೆ ಬಾಗಿಲಿಗೆ ಅಥವಾ ಸಂಬಂಧಪಟ್ಟ ವಾಹನ ಸವಾರನ ಮೊಬೈಲ್ಗೆ ದಂಡದ ಮಾಹಿತಿ ರವಾನಿಸುತ್ತಾರೆ. ಒಂದು ಬಾರಿ ಟ್ರಾಫಿಕ್ ನಿಮಯ ಉಲ್ಲಂಘಿಸಿದ್ರೆ 500 ರೂಪಾಯಿ, ಎರಡನೇ ಬಾರಿಗೆ ಒಂದು ಸಾವಿರ ರೂಪಾಯಿ, ಹೀಗೆ ಎಷ್ಟು ಬಾರಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುತ್ತಾರೋ ಅಷ್ಟು ಹಣ ಕಟ್ಟಬೇಕಾಗೋದು ಅನಿವಾರ್ಯವಾಗಿರುತ್ತದೆ.
ಸದ್ಯ ಕೊರೊನಾ ಸೋಂಕು ಇರುವ ಕಾರಣ ಪೊಲೀಸರು ಸ್ಮಾರ್ಟ್ ವರ್ಕ್ ಮಾಡುತ್ತಿದ್ದು, ಒಂದು ವೇಳೆ ವಾಹನ ಸವಾರರು ಸಿಗ್ನಲ್ಗಳಲ್ಲಿ ಪೊಲೀಸರು ಇಲ್ಲವೆಂದು ರಾಜಾರೋಷವಾಗಿ ತೆರಳಿದ್ರೆ ನಿಮ್ಮ ಮನೆ ಬಾಗಿಲಿಗೆ ಅಥವಾ ನಿಮ್ಮ ಮೊಬೈಲ್ ಸಂಖ್ಯೆಗೆ ದಂಡದ ಮಾಹಿತಿ ಬರೋದು ಖಂಡಿತ.