ಬೆಂಗಳೂರು: ಜಮ್ಮು ಕಾಶ್ಮೀರದಲ್ಲಿ ಹಿಂದುಗಳ ಮಾರಣಹೋಮದ ರೂವಾರಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ ಬಳಿಕ ಇದೀಗ, ಬೆಂಗಳೂರು ಗ್ರಾಮಾಂತರ ಪೊಲೀಸರು ಅಕ್ರಮವಾಗಿ ಬಾಂಗ್ಲಾದೇಶಿ ನುಸುಳುಕೋರರಿಗೆ, ಆಧಾರ್ ಕಾರ್ಡ್ ಹಾಗೂ ಇನ್ನಿತರ ದಾಖಲೆಗಳನ್ನು ಒದಗಿಸುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಸಫಲರಾಗಿದ್ದಾರೆ. ಪೊಲೀಸರ ಈ ಕಾರ್ಯವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಶ್ಲಾಘಿಸಿದ್ದಾರೆ.
ಅಧಿಕೃತ ಮಾಹಿತಿಗಳ ಪ್ರಕಾರ, ಈ ಕುರಿತು ತನಿಖೆ ಕೈಗೊಂಡಿದ್ದ ಪೊಲೀಸರು ಅಕ್ರಮ ವಲಸಿಗರಿಗೆ ದಾಖಲೆಗಳನ್ನು ಪೂರೈಸುತ್ತಿದ್ದ 9 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರಹದ್ದಿನ ಪ್ರದೇಶವೊಂದರಲ್ಲಿ ಎಟಿಎಂ ಜತೆಗೆ 18 ಲಕ್ಷ ರೂಪಾಯಿ ಲೂಟಿ ಪ್ರಕರಣ ನಡೆದಿದ್ದು, ಈ ಸಂಬಂಧ ಅಕ್ರಮವಾಗಿ ದೇಶ ನುಸುಳಿದ್ದ ಬಾಂಗ್ಲಾದೇಶಿ ನಾಗರಿಕೊಬ್ಬನನ್ನು ಬಂಧಿಸಲಾಗಿತ್ತು.
4 ಕೋಟಿ ರೂ. ಬಾಂಗ್ಲಾಗೆ ವರ್ಗಾವಣೆ: ವಿಚಾರಣೆಯ ಸಂದರ್ಭದಲ್ಲಿ ನಕಲಿ ದಾಖಲೆಗಳನ್ನು ಒದಗಿಸುವ ಜಾಲದ ಬಗ್ಗೆ ಸುಳಿವು ಸಿಕ್ಕಿತ್ತು. ಪೊಲೀಸರು ಸಾಕ್ಷ್ಯಾಧಾರಗಳ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ನಕಲಿ ದಾಖಲೆ ಪಡೆದು, ಬೆಂಗಳೂರಿನಲ್ಲಿ ವಾಣಿಜ್ಯ ವ್ಯವಹಾರ ನಡೆಸುತ್ತಿದ್ದ ಅಕ್ರಮ ವಲಸಿಗನೊಬ್ಬ ಸುಮಾರು 4 ಕೋಟಿ ರೂಪಾಯಿಗಳನ್ನು ಬಾಂಗ್ಲಾದೇಶಿ ಕರೆನ್ಸಿಯಾಗಿ(ಟಾಕಾ) ಪರಿವರ್ತಿಸಿ ಆ ದೇಶಕ್ಕೆ ಈಗಾಗಲೇ ವರ್ಗಾವಣೆ ಮಾಡಿದ್ದಾನೆ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.
ಬಂಧಿಸಲ್ಪಟ್ಟ ಆರೋಪಿಗಳಲ್ಲಿ ಒಬ್ಬ ಸಾಫ್ಟ್ವೇರ್ ಎಂಜಿನಿಯರ್ ಹಾಗೂ ಇನ್ನೊಬ್ಬ ಫಾರ್ಮಸಿಸ್ಟ್ ಆಗಿದ್ದು, ಈಗ ಪೊಲೀಸರ ವಶದಲ್ಲಿದ್ದು ತನಿಖೆ ಎದುರಿಸುತ್ತಿದ್ದಾರೆ. ಬಂಧಿಸಲ್ಪಟ್ಟ ಆರೋಪಿಗಳು, ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಇದೀಗ ಪೊಲೀಸರು ಹೆಣೆದ ಬಲೆಗೆ ಬಿದ್ದಿದ್ದಾರೆ.
ಬಂಧಿತರ ವಿರುದ್ಧ ಕ್ರಮ: ಅಕ್ರಮ ವಲಸಿಗರು ಹಾಗೂ ಅವರಿಗೆ ಆಶ್ರಯ ಹಾಗೂ ಇನ್ನಿತರ ಸಹಕಾರ ಒದಗಿಸುತ್ತಿದ್ದವರ ವಿರುದ್ಧ ತೀವ್ರ ನಿಗಾ ವಹಿಸಬೇಕು. ಅಕ್ರಮ ಚಟುವಟಿಕೆಗಳ ಮೇಳೆ ನಿಯಂತ್ರಣ ಹೇರಬೇಕು ಎಂದು ನಿರ್ದೇಶಿಸಿದ್ದೆ. ಅಕ್ರಮ ವಲಸೆ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಬಂಧಿತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವರು ಹೇಳಿದ್ದಾರೆ.
ರಾಜ್ಯದ ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಲೆಸಿರುವವರ ಬಗ್ಗೆ ಸಮೀಕ್ಷೆ ನಡೆಸಿ ಕ್ರಮ ತೆಗೆದುಕೊಳ್ಳಲು ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಓದಿ: ನನ್ನ ವಿರುದ್ದ ಮಾತನಾಡಲು ಜೆಡಿಎಸ್ಗೆ ಯಾವುದೇ ಹಕ್ಕಿಲ್ಲ, ನಾನೀಗ ಕಾಂಗ್ರೆಸ್ನಲ್ಲಿದ್ದೇನೆ: ಶ್ರೀನಿವಾಸಗೌಡ