ಬೆಂಗಳೂರು: ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಸಂಭ್ರಮವನ್ನೇ ಕೋವಿಡ್ ಕಸಿದುಕೊಂಡಿದೆ. ಹಾಗೆಯೇ ಮಹಾನಗರದಲ್ಲೂ ಸರಳವಾಗಿ ಹಬ್ಬವನ್ನು ಆಚರಿಸಲಾಯಿತು.
ಈ ನಡುವೆ 'ನಮ್ಮ ಬಿಟಿಎಮ್ ಗಣೇಶ ಸಂಘ' ದ ವತಿಯಿಂದ ಮಾಸ್ಕ್ ಗೌರಿ-ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ್ದಲ್ಲದೇ, ಭಕ್ತರಿಗೆ ತೀರ್ಥ-ಪ್ರಸಾದದ ಬದಲು ಸ್ಯಾನಿಟೈಸರ್ ಹಂಚಿದ್ದು ಗಮನ ಸೆಳೆಯಿತು. ಅಲ್ಲದೆ ಕಳೆದ ಹತ್ತು ವರ್ಷದಿಂದ ನಡೆಯುತ್ತಿದ್ದ ಅನ್ನದಾನ, ಪ್ರಸಾದ ಹಂಚಿಕೆ, ಮೆರವಣಿಗೆ ಈ ಬಾರಿ ರದ್ದಾಗಿದೆ. ಸರಳವಾಗಿ ಆಚರಿಸಲಾಗಿದೆ ಎಂದು ಸಂಘದ ನವೀನ್ ತಿಳಿಸಿದರು.
ಶಿವಾಜಿನಗರದಲ್ಲಿ ಸರ್ವಧರ್ಮದ ಏಕತೆಗೆ ಸಾಕ್ಷಿಯಾಗ್ತಿದ್ದ, ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸುತ್ತಿದ್ದ ಗೌರಿ-ಗಣೇಶ ಸಮಾರಂಭವೂ ಈ ಬಾರಿ ಸರಳವಾಗಿ ದೇವಸ್ಥಾನದಲ್ಲಿಯೇ ಆಚರಿಸಲಾಯಿತು. ಕಡಿಮೆ ಸಂಖ್ಯೆಯಲ್ಲಿ ಜನ ಭಾಗವಹಿಸಿ, ಪೂಜೆ ನಡೆಸಿ, ಪ್ರಸಾದ ಸ್ವೀಕರಿಸಿದರು. ಪ್ರತಿ ವರ್ಷ ನಡೆಯುತ್ತಿದ್ದ ಅನ್ನದಾನಕ್ಕೂ ಕೋವಿಡ್ನಿಂದ ಬ್ರೇಕ್ ಬಿದ್ದಿದೆ. ಅಲ್ಲದೆ ವಾರಗಳ ಕಾಲ ಮೂರ್ತಿ ಪ್ರತಿಷ್ಠಾಪಿಸಿ ನಡೆಯುತ್ತಿದ್ದ ಸಂಭ್ರಮ ಒಂದೇ ದಿನಕ್ಕೆ ಮುಗಿದಿದೆ.