ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಸಂಬಂಧ ಪ್ರಕರಣವಾರು ವರ್ಗೀಕರಿಸಿ ವಿವಿಧ ಪೊಲೀಸರಿಗೆ ತನಿಖೆಯ ಜವಾಬ್ದಾರಿ ನೀಡಲಾಗಿದೆ. ಸಿಸಿಬಿ ಹಾಗೂ ನಗರ ಪೂರ್ವ ವಿಭಾಗದ ಪೊಲೀಸರು ತ್ವರಿತ ತನಿಖೆಗಾಗಿ ಪ್ರಕರಣಗಳನ್ನು ವಿಂಗಡಿಸಿಕೊಂಡಿದ್ದಾರೆ.
ಗಲಭೆ ಬಳಿಕ ಮೊದಲಿಗೆ ತನಿಖೆ ಹೇಗೆ ಪ್ರಾರಂಭಿಸಬೇಕೆಂಬ ಗೊಂದಲ ಪೊಲೀಸರಲ್ಲಿತ್ತು. ಬಳಿಕ ಹಂತ ಹಂತವಾಗಿ ಸಿಸಿಬಿ ಮತ್ತು ಪೂರ್ವ ವಿಭಾಗ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ತನಿಖೆ ವೇಗವಾಗಿ ಸಾಗುವಂತೆ ಮಾಡಿದ್ದಾರೆ.
ಪ್ರಕರಣವನ್ನು ಹಲವು ಆಯಾಮಗಳಲ್ಲಿ ವಿಂಗಡಿಸಿ ತನಿಖೆ ನಡೆಸಲಾಗುತ್ತಿದೆ. ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣೆಗಳ ವ್ಯಾಪ್ತಿಗಳ ನಡೆದ ದೊಂಬಿ, ಗಲಾಟೆ, ಆಸ್ತಿ ನಷ್ಟ ಸೇರಿದಂತೆ ಎಲ್ಲಾ ರೀತಿಯ ಗಲಭೆ ಪಾತ್ರಧಾರಿಗಳ ತನಿಖೆಯನ್ನು ಪೂರ್ವ ವಿಭಾಗ ಪೊಲೀಸರು ವಹಿಸಿಕೊಂಡಿದ್ದಾರೆ.
ಅದೇ ರೀತಿ ಠಾಣೆಗಳಿಗೆ ಹಾಗೂ ಶಾಸಕರ ಮನೆಗೆ ಬೆಂಕಿ ಇಡಲು ಪ್ಲಾನ್ ಮಾಡಿದ ಆರೋಪಿಗಳ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದಾರೆ. ಘಟನೆಗೆ ಪೊಲಿಟಿಕಲ್ ಲಿಂಕ್, ಟೆರರ್ ಟಚ್ ತನಿಖೆಯನ್ನು ಸಿಸಿಬಿ ಪೊಲೀಸರು ವಹಿಸಿಕೊಂಡಿದ್ದಾರೆ. ಈಗಾಗಲೇ ಸಯೀಯುದ್ದಿನ್ ಎಂಬಾತ ರುದ್ರೇಶ್ ಕೊಲೆ ಪ್ರಕರಣದ ಆರೋಪಿಗಳ ಜೊತೆ ನಂಟು ಹೊಂದಿರುವುದನ್ನು ಪತ್ತೆ ಹಚ್ಚಿದ್ದಾರೆ. ಎಸ್ಡಿಪಿಐ ಮುಖಂಡ ಮುಜಾಯಿಲ್ ಪಾಷಾ, ಮಾಜಿ ಮೇಯರ್ ಸಂಪತ್ ರಾಜ್ ಆಪ್ತ ಅರುಣ್ ಸೇರಿದಂತೆ ಪ್ರಮುಖ ಆರೋಪಿಗಳ ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಒಟ್ಟಾರೆಯಾಗಿ ಪ್ರಕರಣದಲ್ಲಿ ಭಾಗಿಯಾದ ಯಾರೊಬ್ಬರೂ ಬಚಾವಾಗದಂತೆ ಪೊಲೀಸರು ಪ್ಲಾನ್ ಮಾಡಿಕೊಂಡಿದ್ದಾರೆ.