ಬೆಂಗಳೂರು : ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ-ಹೊರಗುತ್ತಿಗೆ ನೌಕರರ (ಬಿಎಂಎಸ್) ಸಂಘ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರು ಚಲೋ ಹಮ್ಮಿಕೊಂಡಿದೆ. ನಗರದ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಉದ್ಯೋಗಿಗಳು ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿದ್ದಾರೆ.
ಈ ಹೋರಾಟದಲ್ಲಿ ಶಾಸಕರು ಹಾಗೂ ನಮ್ಮ ಸಂಘದ ಗೌರವ ಅಧ್ಯಕ್ಷರಾದ ಆಯನೂರು ಮಂಜುನಾಥ್ ಅವರು ತಮ್ಮ ಬೇಡಿಕೆಗಳ ಬಗ್ಗೆ ಪತ್ರ ಮುಖೇನ ಆರೋಗ್ಯ ಸಚಿವರಿಗೂ ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಹಲವಾರು ಬಾರಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ. ಆದರೂ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ನೌಕರರು ಕೆರಳಿದ್ದಾರೆ.
ಬೇಡಿಕೆ ಈಡೇರಿಸಬೇಕಾದ ಸರ್ಕಾರವೇ ನೌಕರರಿಗೆ ವ್ಯತಿರಿಕ್ತವಾದ ಹಾಗೂ ಅಸಂಬದ್ಧವಾದ ಮೂರು ತಿಂಗಳ ಮೌಲ್ಯಮಾಪನ ಆದೇಶ ನೀಡಿತ್ತು. ಇದನ್ನರಿತ ಸಂಘಟನೆ ಹೋರಾಟಕ್ಕೆ ಕರೆಕೊಟ್ಟ ಕೂಡಲೇ ಮೂರು ತಿಂಗಳ ಮೌಲ್ಯಮಾಪನ ರದ್ದತಿ ಆದೇಶದಲ್ಲಿ ಗೊಂದಲವಿದೆ ಎಂದು ಸ್ವತಃ ಅಭಿಯಾನದ ನಿರ್ದೇಶಕರು ತಿಳಿಸಿದ್ದರು. ಮುಂದುವರೆದು ಅದನ್ನೇ ವಾರ್ಷಿಕ ಮೌಲ್ಯಮಾಪನ ಮಾಡಿದ್ದು, ಅದು ಕೂಡ ರದ್ದಾಗಬೇಕು. ಸರ್ಕಾರವೇ ರಚಿಸಿದ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಾಚಾರಿಯವರ ಸಮಿತಿ ವರದಿ ಸಲ್ಲಿಸಿ ವರ್ಷಗಳು ಕಳೆದರೂ ಅನುಷ್ಠಾನಗೊಳಿಸದೇ ಇರುವುದು ನೌಕರರಿಗೆ ಬೇಸರ ಮೂಡಿಸಿದೆ.
ಬೇಡಿಕೆಗಳೇನು? : ನೌಕರರ ಪರವಾದ ಅಂಶಗಳನ್ನು ಹೊಂದಿರುವ ಶ್ರೀನಿವಾಸಾಚಾರಿಯವರ ವರದಿ ಅನುಷ್ಠಾನ, ಸಮಾನ ಕೆಲಸಕ್ಕೆ ಸಮಾನವೇತನ, ಸೇವಾಭದ್ರತೆ, ವಯೋಮಿತಿ ಸಡಿಲಿಕೆ, ಕೃಪಾಂಕ ಹೆಚ್ಚಳ, ವರ್ಗಾವಣೆ, ಹೊರಗುತ್ತಿಗೆ ನೌಕರರರನ್ನು ಸರ್ಕಾರದ ಸಂಸ್ಥೆಯಿಂದ ನಿರ್ವಹಣೆ ಮಾಡಬೇಕು. ಈ ಎಲ್ಲಾ ಬೇಡಿಕೆಗಳನ್ನು ಇಟ್ಟುಕೊಂಡು ರಾಜ್ಯ ಸಂಘ ಫ್ರೀಡಂ ಪಾರ್ಕ್ನಲ್ಲಿ ಹೋರಾಟಕ್ಕೆ ಕರೆ ನೀಡಿದೆ.
ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ನೌಕರರು ಬೆಂಗಳೂರಿಗೆ ಬರುತ್ತಿದ್ದು, ಇದರಿಂದಾಗಿ ರಾಜ್ಯದ ಜನರ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾದರೆ ಸಚಿವರ ಹಾಗೂ ಅಧಿಕಾರಿಗಳ ಹಠಮಾರಿತನವೇ ಹೊರತು, ನೌಕರರಲ್ಲ ಎಂದು ಸಂಘದ (KSHCOEA) ರಾಜ್ಯಾಧ್ಯಕ್ಷ ವಿಶ್ವರಾಧ್ಯ ಎಚ್. ಯಮೋಜಿ ಅವರು ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರೇ ಇರುವುದರಿಂದ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ, ಮುಖ್ಯಮಂತ್ರಿಗಳು ಮಧ್ಯಸ್ಥಿಕೆ ವಹಿಸಬೇಕು ಹಾಗೂ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಚಿವರ ಸಭೆ : ಇದರ ಮಧ್ಯೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹೊರ ಗುತ್ತಿಗೆ ನೌಕರರು ಹಾಗೂ ಎನ್ಹೆಚ್ಎಂ ಅಡಿಯಲ್ಲಿ ಸೇವೆಯಲ್ಲಿರುವ ಗುತ್ತಿಗೆ ಸಿಬ್ಬಂದಿ ಬೇಡಿಕೆಗಳ ಬಗ್ಗೆ ಚರ್ಚಿಸಲು ಇಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಅವರು ವಿಧಾನಸೌಧದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ.
ಇದನ್ನೂ ಓದಿ : ಅಂಡರ್ ಪಾಸ್ಗಾಗಿ ಒತ್ತಾಯಿಸಿ ಮಕ್ಕಳೊಂದಿಗೆ ಧರಣಿ ಕುಳಿತ ಶಾಸಕ