ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಬಿಐಎಎಲ್) ಕಣ್ಣಿಗೆ ಕಾಣುವುದು ಆಕಾಶದಲ್ಲಿ ಲೋಹದ ಹಕ್ಕಿಗಳು, ಐಷಾರಾಮಿ ಕಾರುಗಳು, ಬಸ್ಗಳು ಮಾತ್ರ. ಅಂತಹ ಸ್ಥಳದಲ್ಲಿ ಸೈಕಲ್ ನೋಡುವುದು ಅಸಾಧ್ಯದ ಮಾತು. ಆದರೆ, ಅದೀಗ ಸಾಧ್ಯವಾಗಿದೆ.
'ಬೈಸಿಕಲ್ ಮೇಯರ್' ಎಂದೇ ಖ್ಯಾತಿ ಪಡೆದಿರುವ ಸತ್ಯ ಶಂಕರನ್ ಅವರ ಯೋಚನೆಯಂತೆ ವಿಮಾನ ನಿಲ್ದಾಣದಲ್ಲಿ ಸೈಕಲ್ ಸವಾರರಿಗೆ ಅವಕಾಶ ಮಾಡಿಕೊಡಲು ಬಿಐಎಎಲ್ ನಿರ್ಧರಿಸಿದೆ. ಪ್ರತಿ ಭಾನುವಾರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9.30ರವರೆಗೆ ಬೈಸಿಕಲ್ ಸವಾರಿಗೆ ಅವಕಾಶ ನೀಡಲಾಗಿದೆ.
ಪರಿಸರ ಸ್ನೇಹಿಯಾದ ಸೈಕಲ್ ಬಳಕೆ ಮತ್ತು ಫಿಟ್ನೆಸ್ಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೆಂಗಳೂರಿನ ಸೈಕಲ್ ಸವಾರರು ವಾರಾಂತ್ಯದಲ್ಲಿ ನಂದಿಗಿರಿಧಾಮಕ್ಕೆ ಸವಾರಿ ಹೋಗುತ್ತಾರೆ. ಇದೀಗ, ಅವರಿಗೆ ಮತ್ತೊಂದು ಸ್ಥಳ ಸೈಕಲ್ ಸವಾರಿಗೆ ಬಾಗಿಲು ತೆರೆದಿದೆ.
ಭಾನುವಾರ ಬೆಳಗ್ಗೆ ವಿಮಾನ ನಿಲ್ದಾಣಕ್ಕೆ ಸೈಕಲ್ ಸವಾರಿ ಕೈಗೊಂಡು ಬೆಳಗಿನ ಕಾಫಿಯನ್ನು ಆನಂದಿಸಬಹುದು. ಬೆಳಗಿನ ತಿಂಡಿ, ರೆಸ್ಟೋರೆಂಟ್‍ಗಳಲ್ಲಿ ಭೋಜನ ಸೇವಿಸಬಹುದು.