ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,462ಕ್ಕೆ ಏರಿಕೆಯಾಗಿದ್ದು ಇಂದು ಹೊಸ 67 ಪ್ರಕರಣಗಳು ಪತ್ತೆಯಾಗಿದೆ.
ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ನಗರದಲ್ಲಿ ಮತ್ತೊಂದು ಬಲಿಯಾಗಿದೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 41 ಕ್ಕೆ ಏರಿಕೆಯಾಗಿದೆ. ಇನ್ನು ಆಸ್ಪತ್ರೆಯಿಂದ 556 ಮಂದಿ ಡಿಸ್ಚಾರ್ಜ್ ಆಗಿದ್ದು, 864 ಮಂದಿ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 15 ಮಂದಿ ಐಸಿಯುನಲ್ಲಿದ್ದಾರೆ. ಇತ್ತ ಮುಂಬೈ-ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ ಹೊಂದಿರುವವರಲ್ಲೇ ಹೆಚ್ಚು ಪಾಸಿಟಿವ್ ಕೇಸ್ಗಳು ಪತ್ತೆಯಾಗಿದ್ದು, ಇದು ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.
ಇನ್ನು ಮತ್ತೊಂದು ಕಡೆ ಕರುನಾಡಿಗೆ ಕಂಟಕವಾಗಿದ್ದ ತಬ್ಲಿಘಿ ಪ್ರಕರಣ ಸಹ ಮುಗಿಯುವ ಹಂತವೇ ಕಾಣ್ತಿಲ್ಲ. ಈವರೆಗೆ ನಾಪತ್ತೆಯಾಗಿರುವ ಆ 8 ತಬ್ಲಿಘಿಗಳು ಪತ್ತೆಯಾಗಿಲ್ಲ. ತಮ್ಮ ಫೋನ್ ಸ್ವಿಚ್ಆಫ್ ಮಾಡಿಕೊಂಡು ನಾಪತ್ತೆಯಾಗಿರೋ ಅವರು ಎಲ್ಲಿದ್ದಾರೆ ಎಂಬುದೇ ತಿಳಿದಿಲ್ಲ. ಅವರನ್ನು ಹುಡುಕುವ ದಾರಿ ತಿಳಿಯದೆ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಹೈರಾಣಾಗಿದ್ದಾರೆ. ಹಾಗೆಯೇ ಮಣಿಪಾಲದ ಟಿಎಂಎ ಪೈ ಖಾಸಗಿ ಆಸ್ಪತ್ರೆ ಕೂಡಾ ಕೋವಿಡ್ ರೋಗಿಗಳ ಚಿಕಿತ್ಸೆಗೆ ರಾಜ್ಯ ಸರ್ಕಾರದ ಜೊತೆ ಕೆಲಸ ಮಾಡುತ್ತಿದ್ದು, ಅಲ್ಲಿಯೂ ಪಾಸಿಟಿವ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗ್ತಿದೆ.
ಬೆಂಗಳೂರಿನಲ್ಲಿ ಮತ್ತೊಂದು ಬಲಿ:
ಬೆಂಗಳೂರಿನಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 9 ಕ್ಕೆ ಏರಿಕೆ ಆಗಿದೆ. ಬೆಂಗಳೂರಿನ ನಿವಾಸಿ 43 ವರ್ಷದ ವ್ಯಕ್ತಿ (1236 ಸಂಖ್ಯೆಯ ಸೋಂಕಿತ) ಹೈಪರ್ ಟೆನ್ಷನ್, ಹೃದಯ ಕಾಯಿಲೆ ಹಾಗೂ ಅಂತರ್ ರಾಜ್ಯ ವೆಲ್ಲೂರು, ತಮಿಳುನಾಡಿಗೆ ಪ್ರಯಾಣ ಮಾಡಿರುವ ಹಿನ್ನೆಲೆಯೊಂದಿಗೆ ಮೇ 18 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿದ್ದಾರೆ. ನಗರದಲ್ಲಿ ಇಂದು ಹೊಸ 4 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ ಸೋಂಕಿತರ ಸಂಖ್ಯೆ 250 ಕ್ಕೆ ಏರಿಕೆಯಾಗಿದೆ.