ಬೆಂಗಳೂರು: ವಿದೇಶದಿಂದ ಸಾಮಾಜಿಕ ಜಾಲತಾಣದ ಮೂಲಕ ಡ್ರಗ್ಸ್ ಖರೀದಿ ಮಾಡಿದ್ದ ಪೆಡ್ಲರ್ಗಳನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಾದಕ ಜಾಲ ಪತ್ತೆಗಿಳಿದಿರುವ ಸಿಸಿಬಿ ಪೊಲೀಸರು, ಕಳೆದ 10 ದಿನಗಳಿಂದ ಕಾರ್ಯಾಚರಣೆ ನಡೆಸಿ ವಿದೇಶದಿಂದ ಖರೀದಿಸಿದ್ದ ಡ್ರಗ್ಸ್ ಸಮೇತ ಸಾರ್ಥಕ್ ಆರ್ಯ, ನಿತೀನ್, ಕಾರ್ತಿಕ್ ಗೌಡ, ಝುಮಾನಮನ್, ಮಹಮದ್ ಅಲಿ, ಅಮಲ್ ಬೈಜು, ಫಿನಿಕ್ಸ್ ಶೋನ್, ಪಾಲಡುಗ, ಸನ್ನಿ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಓರ್ವ ನೈಜೀರಿಯಾ ಪ್ರಜೆಯನ್ನೂ ಬಂಧಿಸಲಾಗಿದೆ.
ಡಾರ್ಕ್ ವೆಬ್ ಮುಖಾಂತರ ಬಿಟ್ ಕಾಯಿನ್ ಬಳಸಿ ಎಂಫೈರ್ ಮಾರ್ಕೆಟ್, ಸಿಲ್ಕ್ ರೂಟ್, ಡ್ರಗ್ಸ್ ಬೋರ್ಡ್ ಮತ್ತಿತರ ವೆಬ್ಸೈಟ್ಗಳಿಂದ ವಿವಿಧ ರೀತಿಯ ನಿಷೇಧಿತ ಮಾದಕ ವಸ್ತುಗಳು ಮತ್ತು ನಿದ್ರಾಜನಕ ಮಾತ್ರೆಗಳನ್ನು ಬುಕ್ ಮಾಡಿ ಪೋಸ್ಟ್ ಮೂಲಕ ಆಮದು ಮಾಡಿಕೊಂಡು ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಹೆಚ್ಎಸ್ಆರ್ ಲೇಔಟ್, ವಿಜಯನಗರ, ಮಹಾಲಕ್ಷ್ಮಿ ಪುರಂ, ಹಲಸೂರು, ಕೆ.ಜಿ.ಹಳ್ಳಿ, ಇಂದಿರ ನಾಗರ, ಎಹೆಚ್ಎಲ್ ಮತ್ತು ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಒಟ್ಟು 8 ಸ್ಥಳಗಳಲ್ಲಿ ದಾಳಿ ನಡೆಸಿ ಪಡ್ಲರ್ಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 90 ಲಕ್ಷ ಬೆಲೆ ಬಾಳುವ ಮಾದಕ ವಸ್ತುಗಳಾದ 660 ಎಲ್ಎಸ್ಡಿ ಪೇಪರ್, 386 ಎಂಡಿಎಂಎ 180 ಎಕ್ಸ್ಟೆಸಿ ಮಾತ್ರೆ, 12 ಗ್ರಾಂ ಎಂಡಿಎಂಎ ಕ್ರಿಸ್ಟೆಲ್, 10 ಗ್ರಾಂ ಕೊಕೇನ್ ಪುಡಿ, 12 ಮೊಬೈಲ್ ಫೋನ್, 3 ಲ್ಯಾಪ್ಟಾಪ್, 2 ದ್ವಿಚಕ್ರ ವಾಹನ ಹಾಗೂ ಪೋಸ್ಟಲ್ ಕವರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.