ಬೆಂಗಳೂರು: ಬಿಡಿಎ ಅಕ್ರಮ- ಸಕ್ರಮ ಜಾರಿ ವಿಚಾರವಾಗಿ ಮತ್ತೆ ಹಿರಿಯ ಸಚಿವರಾದ ಜೆ.ಸಿ. ಮಾಧುಸ್ವಾಮಿ ಮತ್ತು ವಿ.ಸೋಮಣ್ಣ ಮಧ್ಯೆ ವಾಕ್ಸಮರ ನಡೆದಿದೆ.
ಈ ಹಿಂದೆ ಇದೇ ವಿಚಾರವಾಗಿ ಗೃಹ ಕಚೇರಿ ಕೃಷ್ಣಾದಲ್ಲಿ ಈ ಇಬ್ಬರು ಸಚಿವರ ಮಧ್ಯೆ ತಿಕ್ಕಾಟ ನಡೆದಿತ್ತು. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಕ್ರಮಕ್ಕೆ 12 ವರ್ಷ ವಾಸ ಇರಬೇಕು ಎಂಬ ವಿಚಾರಕ್ಕೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೇಗೆ ಕೊಡಲು ಸಾಧ್ಯವಾಗುತ್ತದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕಾನೂನು ತೊಡಕಿನ ಬಗ್ಗೆನೂ ಪ್ರಸ್ತಾಪಿಸಿದ್ದಾರೆ.
ಆಗ ಸೋಮಣ್ಣ ಮತ್ತು ಮಾಧುಸ್ವಾಮಿ ನಡುವೆ ಮಾತಿನ ಸಮರ ನಡೆದಿದೆ ಎನ್ನಲಾಗಿದೆ. ಈ ವೇಳೆ 'ಬೆಂಗಳೂರು ಕಷ್ಟ ನಮಗಷ್ಟೇ ಗೊತ್ತು' ಎಂದು ವಿ.ಸೋಮಣ್ಣ ವಾದಿಸಿದ್ದಾರೆ. 'ಬೆಂಗಳೂರು ಏನು ನಿಮ್ಮೊಬ್ಬರದ್ದಾ, ಬೆಂಗಳೂರು ಎಲ್ಲರದ್ದು, ಕಾನೂನು ವಿಚಾರ ಏನಿದೆ ಅದನ್ನು ಹೇಳುತ್ತಿದ್ದೇನೆ' ಎಂದು ಮಾಧುಸ್ವಾಮಿ ತಿರುಗೇಟು ನೀಡಿದ್ದಾರೆ ಎಂದು ಹೇಳಲಾಗಿದೆ.
ಇಬ್ಬರು ಸಚಿವರ ನಡುವಿನ ವಾಕ್ಸಮರದ ವೇಳೆ ಮಧ್ಯಪ್ರವೇಶ ಮಾಡಿದ ಸಿಎಂ, 'ಈ ರೀತಿ ಕಿತ್ತಾಡಿದ್ರೆ ಸರ್ಕಾರದ ಇಮೇಜ್ ಏನಾಗಬೇಕು? ಹಿರಿಯ ಸಚಿವರೇ ಕಿತ್ತಾಡ್ತಿದ್ದಾರೆ ಅಂತಾ ಆಗುತ್ತದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಇಬ್ಬರು ಸಚಿವರು ಸುಮ್ಮನಾದರು ಎನ್ನಲಾಗಿದೆ.