ಬೆಂಗಳೂರು: ದಸರಾ ಹಬ್ಬ ಸಮೀಪಿಸುತ್ತಿದ್ದು, ನಗರದ 80 ಸಾರ್ವಜನಿಕ ಸ್ಥಳಗಳಲ್ಲಿ ದುರ್ಗಾದೇವಿಯ ಆರಾಧನೆಗೆ ಅವಕಾಶ ಕೊಡುವಂತೆ ಬಂಗಾಲಿ ಸಮಾಜದವರು ಮನವಿ ಮಾಡಿದ್ದಾರೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುರ್ಗಾದೇವಿಯ ಆರಾಧನೆಯಲ್ಲಿ 50 ರಿಂದ100 ಜನ ಭಾಗವಹಿಸಲು ಈ ಸಮುದಾಯದವರು ಅನುಮತಿ ಕೇಳಿದ್ದಾರೆ. ಆದರೆ ಸರ್ಕಾರದ ಮಾರ್ಗಸೂಚಿಗಾಗಿ ಬಿಬಿಎಂಪಿ ಎದುರುನೋಡುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ ಎಂದು ಹೇಳಿದರು.
ನಗರದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ತ್ವರಿತವಾಗಿ ನೀರು ನಿಲ್ಲುವ ಜಾಗ, ಲಾರ್ವಾ ಸರ್ವೇ, ಸೊಳ್ಳೆ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಖಾಸಗಿ ಸಂಸ್ಥೆ ಮೂಲಕ ಬಿಬಿಎಂಪಿ ಕಾರ್ಯಾಚಾರಣೆ ನಡೆಸುತ್ತಿದೆ. ಜನರು ಸೊಳ್ಳೆ ಹೆಚ್ಚಿರುವ ಸ್ಥಳಗಳ ಮಾಹಿತಿಯನ್ನು ಸಹಾಯ ಆ್ಯಪ್‌ನಲ್ಲಿ ತಿಳಿಸಬಹುದಾಗಿದೆ. ವೈರಲ್‌ಫಿವರ್ ನಿಂದ ಮಕ್ಕಳು ಆಸ್ಪತ್ರೆ ಕಡೆಗೆ ಚಿಕಿತ್ಸೆಗಾಗಿ ಬರುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದ್ದು, 100 ಹಾಸಿಗೆಗಳ ಸುಮಾರು 50 ಕ್ಕೂ ಹೆಚ್ಚು ಆಸ್ಪತ್ರೆಗೆ ಪ್ರತಿನಿತ್ಯ 25 ರಿಂದ 30 ಮಕ್ಕಳು ಬರುತ್ತಿದ್ದಾರೆ. ಈ ಪೈಕಿ 5 ರಷ್ಟು ಜನ ದಾಖಲಾಗುತ್ತಿದ್ದಾರೆ ಎಂದು ವಿವರಿಸಿದರು.
ಕಳೆದ 4 ತಿಂಗಳಲ್ಲಿ 33,483 ಜನರು ಆಸ್ಪತ್ರೆಗೆ ದಾಖಲಾಗಿದ್ದು, ಇದರಲ್ಲಿ ಮಕ್ಕಳ ದಾಖಲಾತಿ ಶೇ.30 ರಷ್ಟಿದೆ, 0-12 ವರ್ಷದೊಳಗಿನವರು 4,052 ಮಕ್ಕಳು , 12-18 ವರ್ಷದೊಳಗಿನವರು 1, 368 ಮಕ್ಕಳು ದಾಖಲಾಗಿದ್ದಾರೆ ಎಂದರು.
ರಸ್ತೆಗುಂಡಿ ದುರಸ್ತಿಗೆ ಗಡುವು ವಿಸ್ತರಣೆ
ನಗರದಲ್ಲಿ ಮಳೆಯಿಂದಾಗಿ ರಸ್ತೆಗುಂಡಿಗಳು ಹೆಚ್ಚಾಗಿದ್ದು, ಎಲ್ಲಾ ಮುಖ್ಯರಸ್ತೆ ಹಾಗೂ ವಾರ್ಡ್ ರಸ್ತೆಗಳನ್ನು ದುರಸ್ತಿಪಡಿಸಲು 25 ದಿನಗಳ ಕಾಲಮಿತಿ ನೀಡಲಾಗಿದೆ. ಹೊರವಲಯದಲ್ಲಿ ಜಲಮಂಡಳಿ ಕಾಮಗಾರಿಯಿಂದ ಹಾಳಾದ ರಸ್ತೆ ಸರಿಪಡಿಸಲು ಸರ್ಕಾರ ಅನುದಾನ ನೀಡಿದ್ದು, ಟೆಂಡರ್ ಕರೆಯಲು ಸಿದ್ಧತೆ ಮಾಡಲಾಗಿದೆ ಎಂದು ಹೇಳಿದರು.