ಬೆಂಗಳೂರು: ಘನತ್ಯಾಜ್ಯ ನಿಯಮದ ಪ್ರಕಾರ ಹಸಿಕಸವನ್ನು ಬಿಬಿಎಂಪಿ ವಾಹನಗಳಿಗೆ ನೀಡದೆ ಮನೆಯಲ್ಲೇ ಗೊಬ್ಬರ ಮಾಡಬೇಕು. ಅಲ್ಲದೆ ಸರ್ಕಾರಿ ಕಚೇರಿಗಳಿಗೆ, ಸರ್ಕಾರಿ ಅಧಿಕಾರಿ, ನೌಕರರ ಮನೆಯಲ್ಲಿ ಕಡ್ಡಾಯವಾಗಿ ಕಾಂಪೋಸ್ಟ್ ಮಾಡಬೇಕು.
ಈ ಕುರಿತು ಎಲ್ಲರಿಗೂ ಮಾದರಿಯಾಗುವಂತೆ ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್, ತಮ್ಮ ಮನೆಯಲ್ಲಿಯೇ ಹಸಿಕಸವನ್ನು ದೊಡ್ಡ ಡಬ್ಬಕ್ಕೆ ತುಂಬಿ, ಕೊಕೋಪಿಟ್ ಹಾಕಿ ಗೊಬ್ಬರ ಮಾಡುವ ಮಾದರಿ ತೋರಿಸಿಕೊಟ್ಟಿದ್ದಾರೆ. ಅಲ್ಲದೆ ಗೊಬ್ಬರವನ್ನು ತಮ್ಮದೇ ಕೈತೋಟ ಅಥವಾ ಪಾಲಿಕೆ ಪಾರ್ಕ್‌ಗಳಿಗೂ ಕೂಡಾ ಹಾಕಬಹುದು ಅಂತಾ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣಾ ಸರ್ವೇಯ ಹಿನ್ನೆಲೆ ಪಾಲಿಕೆ ಅಧಿಕಾರಿಗಳು, ನೌಕರರು ಸ್ವಚ್ಛ ಬೆಂಗಳೂರಿನೆಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಹಸಿ ಕಸ, ಒಣ ಕಸ ವಿಂಗಡಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚಿನ ಪ್ರಚಾರ ನಡೆಸುತ್ತಿದ್ದಾರೆ.
ಅಲ್ಲದೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ವ್ಯಾಪಾರಿಗಳ ಮೂಲಕವೇ ಜನಜಾಗೃತಿ ಮೂಡಿಸಲಾಗುತ್ತಿದೆ. ದೇಶದ ನಗರಗಳ ಪೈಕಿ ಸ್ವಚ್ಛ ನಗರ ಎಂಬ ಪಟ್ಟ ಪಡೆಯಲು ಬೆಂಗಳೂರು ನಗರ ಆಡಳಿತ ಪ್ರಯತ್ನ ಮುಂದುವರೆಸಿದೆ.