ಬೆಂಗಳೂರು : ನಗರಕ್ಕೆ ಎರಡನೇ ಕೋವಿಡ್ ಅಲೆ ಬಾಧಿಸದಂತೆ ಮೊದಲೇ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವ ಸಲುವಾಗಿ ಬಿಬಿಎಂಪಿ ಇಂದು ರಾಜ್ಯ ಸರ್ಕಾರ ನಡೆಸಿದ ಆನ್‌ಲೈನ್ ಸಭೆಯಲ್ಲಿ ಭಾಗಿಯಾಗಿತ್ತು.
ಸಭೆ ಬಳಿಕ ಮಾತನಾಡಿದ ಆಯುಕ್ತರಾದ ಮಂಜುನಾಥ್ ಪ್ರಸಾದ್, ನಗರದ ಕೋವಿಡ್ ಸೋಂಕು ಪರೀಕ್ಷಾ ಪ್ರಮಾಣ 23 ಸಾವಿರದಿಂದ 30 ಸಾವಿರಕ್ಕೆ ಹೆಚ್ಚಳ ಮಾಡಲು ಆರೋಗ್ಯ ಸಚಿವರು ಸೂಚಿಸಿದ್ದಾರೆ. ಎಲ್ಲೆಲ್ಲಿ ಶಿಕ್ಷಣ ಸಂಸ್ಥೆಗಳಿವೆ, ಎಲ್ಲಾ ಕಡೆ ಕೋವಿಡ್ ಟೆಸ್ಟಿಂಗ್ ನಡೆಯಲಿದೆ. ನರ್ಸಿಂಗ್ ಕಾಲೇಜಿನಲ್ಲಿ 18 ಸಾವಿರ ವಿದ್ಯಾರ್ಥಿಗಳ ಪೈಕಿ, 10 ಸಾವಿರ ಜನಕ್ಕೆ ಟೆಸ್ಟಿಂಗ್ ಮಾಡಲಾಗಿದೆ. ಟೆಸ್ಟಿಂಗ್ ಮುಂದುವರಿದಿದೆ ಎಂದು ಹೇಳಿದರು.
ಇದಲ್ಲದೇ ರೆಸಿಡೆನ್ಸ್ ವೆಲ್ಫೇರ್ ಅಸೋಸಿಯೇಷನ್ಗಳಲ್ಲಿ ಮಾಹಿತಿ ಪಡೆದು, ರ್ಯಾಂಡಮ್ ಟೆಸ್ಟ್ ನಡೆಸಲಾಗುವುದು. ಕೋವಿಡ್ ಲಕ್ಷಣ ಇದ್ದವರ ಮಾಹಿತಿ ಕಲೆಹಾಕಿ, ಆ ಅಪಾರ್ಟ್ಮೆಂಟ್ಗಳಲ್ಲಿ ರ್ಯಾಂಡಮ್ ಟೆಸ್ಟ್ ನಡೆಸಲಾಗುವುದು ಎಂದರು.
ಅಲ್ಲದೆ, ಚಿತ್ರಮಂದಿರಗಳು, ಗಾರ್ಮೆಂಟ್ಸ್, ಹೋಟೆಲ್, ರೆಸ್ಟೋರೆಂಟ್ ಸಿಬ್ಬಂದಿ, ಮದುವೆಯ ಅಡುಗೆ ಸಿಬ್ಬಂದಿಗೂ ಟೆಸ್ಟಿಂಗ್ ನಡೆಸಲಾಗುವುದು. ದೊಡ್ಡ ಮದುವೆ ಹಾಲ್ಗಳಲ್ಲಿ ಮಾರ್ಷಲ್ಸ್ ನೇಮಕ ಮಾಡಿ, ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುವುದು. ಅಲ್ಲದೆ ಎಲ್ಲಾ ಮದುವೆ ಸಭಾಭವನಗಳಲ್ಲಿ ಕೋವಿಡ್ ಮುನ್ನೆಚ್ಚರಿಕಾ ಫಲಕ ಅಳವಡಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವವರಿಗೆ 72 ಗಂಟೆಯೊಳಗೆ ಟೆಸ್ಟ್ ಮಾಡಿಸಿರುವ ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ತೋರಿಸುವುದು ಕಡ್ಡಾಯ ಮಾಡಲಾಗಿದೆ. ಇದರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕೋವಿಡ್ ವ್ಯಾಕ್ಸಿನ್ ಪಡೆಯಲು 28 ರವರೆಗೆ ಗಡುವು ವಿಸ್ತರಣೆ : ಆರೋಗ್ಯ ಕಾರ್ಯಕರ್ತರು ಹಾಗೂ ಫ್ರಂಟ್‌ಲೈನ್ ವರ್ಕರ್ಸ್ಗೆ ಇದ್ದ ಮೊದಲ ಹಾಗೂ ಎರಡನೇ ಹಂತದ ಕೋವಿಡ್ ವ್ಯಾಕ್ಸಿನ್ ಅವಧಿಯನ್ನು ಫೆ.28ರವರೆಗೆ ವಿಸ್ತರಿಸಲು ರಾಜ್ಯ ಸರ್ಕಾರ ಸೂಚಿಸಿದೆ ಎಂದು ಆಯುಕ್ತರು ತಿಳಿಸಿದರು. ಸದ್ಯ ಮೊದಲನೇ ಡೋಸ್ ಶೇ.50ರಷ್ಟು ಪೂರ್ಣಗೊಂಡಿದೆ. ಇದನ್ನೇ ಶೇ.80ಕ್ಕೆ ಏರಿಕೆ ಮಾಡಲು ಟಾರ್ಗೆಟ್ ಹಾಕಿಕೊಳ್ಳಲಾಗಿದೆ ಎಂದರು.
ನಗರದ ಹೊರವಲಯದಲ್ಲಿ ಕೋವಿಡ್ ಕೇಸ್ ಹೆಚ್ಚುತ್ತಿದೆ. ಬೊಮ್ಮನಹಳ್ಳಿ, ಮಹದೇವಪುರ ಭಾಗದಲ್ಲಿ ನಿತ್ಯ 200 ರಿಂದ 300 ಕೇಸ್ ವರದಿಯಾಗುತ್ತಿವೆ. ಹೀಗಾಗಿ, ನಿತ್ಯ ರಿವ್ಯೂ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.